ರಂಗಭೂಮಿಗೆ ಏಕ ವ್ಯಕ್ತಿ ಪ್ರದರ್ಶನ ಪ್ರಮುಖ

10 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಂಗಭೂಮಿಗೆ ಏಕ ವ್ಯಕ್ತಿ ಪ್ರದರ್ಶನ ಪ್ರಮುಖ ಪಾತ್ರ ವಹಿಸುತ್ತದೆ. ಇಂಥಹ ಪ್ರದರ್ಶನದ ಜತೆಗೆ ನಾಟಕಗಳು ಹೆಚ್ಚು ಹೆಚ್ಚು ಪ್ರದರ್ಶನಗೊಂಡು ರಂಗಭೂಮಿ ಉಳಿಸಬೇಕು ಎಂದು ರಂಗ ನಿರ್ದೇಶಕ ಡಾ. ಪ್ರಕಾಶ ಗರುಡ ಹೇಳಿದರು.
ನಗರದ ಸ್ನೇಹಿತರು ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಆಲೂರು ವೆಂಕಟರಾವ್ ಭವನದಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿದ್ದ ಏಕವ್ಯಕ್ತಿ ರಂಗಪ್ರಯೋಗ ನಾಟಕೋತ್ಸವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಹರ್ಷ ಡಂಬಳ ಮಾತನಾಡಿ, ನಿರಂತರ ರಂಗಭೂಮಿ ಚಟುವಟಿಕೆಗಳು ಬೆಳೆಯಬೇಕು. ಏಕವ್ಯಕ್ತಿ ಪ್ರದರ್ಶನಗಳು ರಾಜ್ಯಾದ್ಯಂತ ಹೆಚ್ಚು ಪ್ರದರ್ಶನವಾಗುತ್ತಿದ್ದು, ರಂಗಭೂಮಿ ಬೆಳವಣಿಗೆ ಪೂರಕವಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೇಕ್ಕೆರಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತಮ ಕಲಾ ತಂಡಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದೆ. ಇಂದು ಕಲಾ ತಂಡಗಳಿಗೆ ಸಿಕ್ಕ ಅನುದಾನಕ್ಕಿಂತ ಹೆಚ್ಚು ಖರ್ಚು ಮಾಡಿ ಪ್ರದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದರು.
ನಾಗೇಂದ್ರ ದೊಡಮನಿ ಅಧ್ಯಕ್ಷತೆ ವಹಿಸಿದ್ದರು. ಲತಾ ಮಳ್ಳೂರ, ಇತರರು ಇದ್ದರು. ಬಳಿಕ ಡಾ. ಡಿ. ಎಸ್. ಚೌಗಲೆ ರಚನೆಯ ಅಕ್ಷರಸ್ಥ ಸಾವಿತ್ರಿಬಾಯಿ ಫುಲೆ ಏಕವ್ಯಕ್ತಿ ಪ್ರದರ್ಶನವನ್ನು ಎ.ಎಸ್. ಶೈಲಜಾ ಪ್ರಕಾಶ ಪ್ರಸ್ತುತಪಡಿಸಿದರು.
ವಿಜಯೇಂದ್ರ ಅರ್ಚಕ ಸ್ವಾಗತಿಸಿದರು. ರತ್ನಾ ಅರ್ಚಕ ನಿರೂಪಿಸಿದರು. ಸಂತೋಷ ಮಹಾಲೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net