ಮಹಿಳೆಯರು, ಮಕ್ಕಳಿಗೆ ಪೌಷ್ಟಿಕ ಆಹಾರ ಅವಶ್ಯ

12ark3
Published on

ಅರಕಲಗೂಡು: ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದ್ದು, ಪೌಷ್ಟಿಕ ಆಹಾರ ಸೇವನೆಯತ್ತ ಗಮನ ನೀಡಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಬಿ.ಕೆ.ನಾಗೇಶಮೂರ್ತಿ ತಿಳಿಸಿದರು.


ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಪೌಷ್ಟಿಕ ಆಹಾರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಆರೋಗ್ಯಕ್ಕೆ ಪೌಷ್ಟಿಕಯುಕ್ತ ಸಮತೋಲನ ಆಹಾರ ಅಗತ್ಯ, ಅಪೌಷ್ಟಿಕತೆ ಹಲವು ರೋಗಗಳಿಗೆ ಕಾರಣವಾಗುತ್ತಿದೆ. ಅಲ್ಲದೆ ಶಿಶು ಮರಣಕ್ಕೂ ಕಾರಣವಾಗುತ್ತಿದೆ. ಸ್ವಾಸ್ಥೃ ಸಮಾಜ ನಿರ್ಮಾಣಕ್ಕೆ ಅಪೌಷ್ಟಿಕತೆ ಕುರಿತು ಅರಿವು ಅತ್ಯಗತ್ಯ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶದ ಜನರಲ್ಲಿ ಈ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಚೇತನಾ ಮಾತನಾಡಿ, ಬದಲಾದ ಜೀವನ ಶೈಲಿ ಹಾಗೂ ಆಹಾರ ಕ್ರಮ ಅಪೌಷ್ಟಿಕತೆಗೆ ಮುಖ್ಯ ಕಾರಣ. ನಮ್ಮ ಹಿರಿಯರು ಆಹಾರ ಸೇವನೆ ಕುರಿತು ಉತ್ತಮ ಜ್ಞಾನ ಹೊಂದಿದ್ದ ಕಾರಣ ಆರೋಗ್ಯವಾಗಿ ಹೆಚ್ಚುಕಾಲ ಜೀವಿಸುತ್ತಿದ್ದರು. ಪೌಷ್ಟಿಕಾಂಶಯುಕ್ತ ಆಹಾರವನ್ನು ನಿಗದಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.

ಪೌಷ್ಟಿಕ ಆಹಾರದ ಪ್ರಾಮುಖ್ಯತೆ ಕುರಿತು ವಕೀಲ ಎಸ್.ಟಿ. ಪ್ರಕಾಶ್ ಮಾಹಿತಿ ನೀಡಿದರು. ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ್, ತಾಪಂ ಇಒ ಪ್ರಕಾಶ್, ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ವಿಜಯಕುಮಾರ್ ಮಾತನಾಡಿದರು. ಸಿಡಿಪಿಒ ವೆಂಕಟೇಶ್, ವಕೀಲರ ಸಂಘದ ಕಾರ್ಯದರ್ಶಿ ಎಚ್.ಡಿ.ರವಿಚಂದ್ರ, ಖಜಾಂಚಿ ಎಸ್.ಎ.ಕೃಷ್ಣ, ಸರ್ಕಾರಿ ವಕೀಲ ಸಿ.ಎಸ್.ಸತೀಶ್ ಕುಮಾರ್, ವಕೀಲರಾದ ಶಂಕರಯ್ಯ, ದೊರೆಸ್ವಾಮಿ, ವೇದಮೂರ್ತಿ ಇತರರು ಇದ್ದರು. ಅಂಗನವಾಡಿ ಕಾರ್ಯಕರ್ತೆಯರಿಂದ ಪೌಷ್ಟಿಕಾಂಶಯುಕ್ತ ಆಹಾರಗಳ ಪ್ರದರ್ಶನ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net