ಕುಖ್ಯಾತ ದರೋಡೆಕೋರನ ಕಾಲಿಗೆ ಗುಂಡೇಟು

h7-mahesh kale
Published on

ಹುಬ್ಬಳ್ಳಿ: ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿ ದರೋಡೆಗಿಳಿಯುತ್ತಿದ್ದ ಖತರ್ನಾಕ್ ‘ಗಾಯಿ ಪರೀದಿ ಗ್ಯಾಂಗ್’ನ ಸದಸ್ಯನ್ನೊಬ್ಬನನ್ನು ಇಲ್ಲಿಯ ಗೋಕುಲ ರೋಡ್ ಪೊಲೀಸ್ ಠಾಣೆಯ ಪೊಲೀಸರು ಸೋಮವಾರ ಬೆಳಗ್ಗೆ 3 ಗಂಟೆಗೆ ಫೈರಿಂಗ್ ಮಾಡಿ ಬಂಧಿಸಿದ್ದಾರೆ.
ಮಹೇಶ ಸೀತಾರಾಮ ಕಾಳೆ ಬಂಧಿತ ದರೋಡೆಕೋರ. ಈತ ಐದಾರು ಸಹಚರರ ಜತೆಗೂಡಿ ಗೋಕುಲ ರಸ್ತೆಯಲ್ಲಿ ಇಂದು ಬೆಳಗಿನ ಜಾವ ಒಂಟಿ ಮನೆಯ ದರೋಡೆಗೆ ಯತ್ನಿಸಿದ್ದಾರೆ. ಈ ವೇಳೆ ಅಕ್ಕಪಕ್ಕದ ನಿವಾಸಿಗಳು ಎಚ್ಚರಗೊಂಡ ಹಿನ್ನೆಲೆಯಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಚೆಕ್ ಪೋಸ್ಟ್‌ನಲ್ಲಿ ತಪಾಸಣೆಯಲ್ಲಿದ್ದ ಗೋಕುಲ ರಸ್ತೆಯ ಪೊಲೀಸರು ಅನುಮಾನ್ಪದವಾಗಿ ಬೈಕ್‌ನಲ್ಲಿ ಬಂದ ಮಹೇಶ ಕಾಳೆಯನ್ನು ತಡೆದು ನಿಲ್ಲಿಸಿ ವಿಚಾರಿಸಿದ್ದಾರೆ. ಈ ವೇಳೆ ಮನೆ ದರೋಡೆಗೆ ಯತ್ನಿಸಿದ ವಿಷಯ ಬಯಲಾಗಿದೆ. ಅಷ್ಟೇ ಅಲ್ಲದೇ ಇತರರು ರೇವಡಿಹಾಳ ಬ್ರಿಡ್ಜ್ ಬಳಿ ಇರುವುದಾಗಿ ತಿಳಿಸಿದ್ದಾನೆ. ಹೀಗಾಗಿ ಪೊಲೀಸ್ ಇನ್‌ಸ್ಪೆಕ್ಟರ್ ಪ್ರವೀಣ ನೀಲಮ್ಮನವರ ಆದೇಶದ ಮೇರೆಗೆ ಪಿಎಸ್‌ಐ ಸಚಿನ್ ದಾಸರಡ್ಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.
ಉಳಿದವರ ಬಂಧನಕ್ಕೆ ಮುಂದಾದಾಗ ಆರೋಪಿ ಮಹೇಶ ಕಾಳೆ ಹಲ್ಲೆಗೆ ಯತ್ನಿಸಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಪಿಎಸ್‌ಐ ಸಚಿನ್ ದಾಸರಡ್ಡಿ ಆಗ ದರೋಡೆಕೋರನ ಕಾಲಿಗೆ ಫೈರಿಂಗ್ ಮಾಡಿದಾರೆ. ಈ ವೇಳೆ ಪಿಎಸ್‌ಐ ಸಚಿನ್ ಹಾಗೂ ಮುಖ್ಯಪೇದೆ ವಸಂತ ಗುಡಗೇರಿ ಅವರಿಗೆ ಗಾಯಗಳಾಗಿವೆ. ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
26 ದರೋಡೆ ಪ್ರಕರಣದಲ್ಲಿ ಭಾಗಿ: ತಮ್ಮ ಇಲಾಖೆಯ ಸಿಬ್ಬಂದಿಯ ಆರೋಗ್ಯ ವಿಚಾರಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸುದ್ದಿಗಾರರೊಂದಿಗೆ ಮಾತನಾಡಿ, ಗಾಯಿ ಪರೀದಿ ಎಂಬ ಖತರ್ನಾಕ ಗ್ಯಾಂಗ್‌ನ ಸದಸ್ಯರು ಗೋಕುಲ್ ಗ್ರಾಮದ ಬಳಿ ಮನೆ ದರೋಡೆಗೆ ಮುಂದಾಗಿದ್ದರು. ಈ ಗ್ಯಾಂಗ್‌ನ ಸದಸ್ಯನೊಬ್ಬನನ್ನು ಬಂಧಿಸಲಾಗಿದೆ. ಈತ ಮಹಾರಾಷ್ಟ್ರ, ಔರಂಗಬಾದ್ ಸೇರಿ ವಿವಿಧ ರಾಜ್ಯಗಳಲ್ಲಿ 26 ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ನಗರ ಹೊರವಲಯದ ಒಂಟಿ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಮನೆಗಳಿಗೆ ಮೊದಲು ಕಲ್ಲು ಒಡೆದು, ಬಳಿಕ ಮನೆಯೊಳಗೆ ನುಗ್ಗಿ ಮನೆಯ ಸದಸ್ಯರನ್ನು ಕಟ್ಟಿಹಾಕಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದರು. 2023ರಲ್ಲಿ ಗೋಕುಲ ರಸ್ತೆಯ ರಜನಿಕಾಂತ ದೊಡ್ಡಮನಿ ಎಂಬುವವರ ಮನೆಯಲ್ಲಿ ಈ ಗ್ಯಾಂಗ್ ಇಂತಹ ಕೃತ್ಯ ಎಸಗಿ ಸುಮಾರು 2 ಕೆಜಿಗೂ ಆಧಿಕ ಚಿನ್ನಾಭರಣ ಕದ್ದು ಪರಾರಿಯಾಗಿತ್ತು. ಆ ಪ್ರಕರಣದ ಮುಖ್ಯ ಆರೋಪಿ ಸುನೀಲ್ ಚವ್ಹಾಣ ಎಂಬಾತನನ್ನು ಬಂಧಿಸಲಾಗಿದೆ. ಇದೀಗ ಇದೇ ಗ್ಯಾಂಗ್‌ನ ಮತ್ತೊಬ್ಬ ಸದಸ್ಯನನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ 15-20 ಜನರ ಹೆಸರನ್ನು ಬಂಧಿತ ಹೇಳಿದ್ದಾನೆ. ಮುಂದಿನ ದಿನಗಳಲ್ಲಿ ಆರೋಪಿಯನ್ನು ಕಸ್ಟಿಡಿಗೆ ತೆಗೆದುಕೊಂಡು ಮತ್ತಷ್ಟು ಜನರನ್ನು ಬಂಧಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net