

ಲಕ್ಷ್ಮೇಶ್ವರ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಸೋಮವಾರ ಮತದಾರರ ಸಾಕ್ಷರತಾ ಕ್ಲಬ್ ಅಡಿ 2023-24ನೇ ಸಾಲಿನ ಕಾಲೇಜು ಸಂಸತ್ ಚುನಾವಣೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಕಾಲೇಜಿನ ಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದು ವಿಶೇಷವಾಗಿತ್ತು.
ಮುಂದಿನ ದಿನಗಳಲ್ಲಿ ಮತದಾನ ಮಾಡಲು ಸಿದ್ಧ್ದರಾಗಲಿರುವ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಪಾಠದಂತೆ ಚುನಾವಣೆಯ ಪ್ರಕ್ರಿಯೆನ್ನು ನಡೆಸಲಾಯಿತು.
ಕಾಲೇಜು ವಿದ್ಯಾರ್ಥಿಗಳಿಗೆ ಚುನಾವಣೆ ಪ್ರಕ್ರಿಯೆಗಳಗಳಾದ ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯುವುದು, ಚಿಹ್ನೆಗಳ ಹಂಚಿಕೆ, ಪ್ರಚಾರದ ವೈಖರಿ ಮುಂತಾದ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಅರಿವು ಮೂಡಿಸಲಾಯಿತು. ಚುನಾವಣೆ ನಡೆಯುವ ರೀತಿಯಲ್ಲಿಯೇ ವಿದ್ಯಾರ್ಥಿಗಳು ಪಾಲ್ಗೊಂಡು ಪ್ರಚಾರ, ಮತದಾನದ ರೀತಿ ನೀತಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.
ಚುನಾವಣಾಧಿಕಾರಿಗಳು ಯಾವ ರೀತಿಯಾಗಿ ಯಾವ ಕಾರ್ಯಗಳನ್ನು ನಿರ್ವಹಿಸುತ್ತಾರೆ?. ಮತ್ತು ಮತದಾನ ಮುಗಿದ ಮೇಲೆ ಪೆಟ್ಟಿಗೆಯನ್ನು ಯಾವ ರೀತಿ ಸಾಗಿಸಲಾಗುತ್ತದೆ? ಅದರ ಪ್ರಕ್ರೀಯೆಗಳು ಹೇಗೆ ? ಎನ್ನುವ ಅರಿವನ್ನು ಮೂಡಿಸಲಾಯಿತು. ಮತದಾನ ಮುಕ್ತಾಯವಾದ ಮೇಲೆ ಅದನ್ನು ಸೀಲ್ ಮಾಡಿ ಸ್ಟ್ರಾಂಗ್ ರೂಂನಲ್ಲಿ ಹೇಗೆ ಇಡುತ್ತಾರೆ? ಮತ ಎಣಿಕೆಯ ಕಾರ್ಯ ಹೇಗೆ ನಡೆಯುತ್ತದೆ ? ಎಂಬುದರ ಬಗ್ಗೆ ಸಂಪೂರ್ಣವಾಗಿ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಯ ಮೂಲಕ ತಿಳಿಸಲಾಯಿತು.
ಇಲ್ಲಿ ವಿದ್ಯಾರ್ಥಿಗಳು ಅಭ್ಯರ್ಥಿಗಾಗಿ, ಏಜೆಂಟರಾಗಿ, ಮತಗಟ್ಟೆ ಅಧಿಕಾರಿಗಾಗಿ, ಪೊಲೀಸರಾಗಿ, ವೈದ್ಯಾಧಿಕಾರಿಗಳಾಗಿ, ಆಶಾ ಕಾರ್ಯಕರ್ತರಾಗಿ ಪಾಲ್ಗೊಂಡಿದ್ದರು. ಎಲ್ಲ ಚುನಾವಣೆಯ ಪ್ರಕ್ರಿಯೆಯು ಮತದಾರರ ಸಾಕ್ಷರತಾ ಕ್ಲಬ್ ತಾಲೂಕು ಸಂಯೋಜಕ ಹಾಗೂ ರಾಜ್ಯಶಾಸ್ತ್ರ ಉಪನ್ಯಾಸಕ ಮಂಜುನಾಥ್ ಕೊಕ್ಕರಗುಂದಿ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಡೆಯಿತು.
ಪ್ರಾಚಾರ್ಯ ಕುಬೇರಪ್ಪ ಸಿದ್ರಾಮಣ್ಣವರ, ಉಪನ್ಯಾಸಕರಾದ ಭಾಗ್ಯಲಕ್ಷ್ಮಿ ಜಿ, ವಿನಾಯಕ್ ವೇತಾಳ, ಆರ್.ಎಂ. ಬಡಿಗೇರ್, ಪರಮೇಶ್ವರ್ ಲಮಾಣಿ, ದೀಪಾ ಪೂಜಾರ್, ವಿಜಯಲಕ್ಷ್ಮಿ ಸುಗುನಳ್ಳಿ, ಚಂದನಾ ಕಾಕೋಳ್ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಕಾಲೇಜು ಸಂಸತ್ ಚುನಾವಣೆ ನೆರವೇರಿಸಲಾಯಿತು. ಆಯ್ಕೆಯಾದ ವಿದ್ಯಾರ್ಥಿಗಳು ನಂತರ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.