ಭಾಷಾ ವೈರುಧ್ಯ ರಹಿತ ಮನೋಭಾವ: ಸಚಿವ ಕಡನ್ನಪ್ಪಳ್ಳಿ ರಾಮಚಂದ್ರನ್ ಆಶಯ

Published on

ಕುಂಬಳೆ: ಕನ್ನಡ ಭಾಷೆಗೆ, ಸಂಸ್ಕೃತಿಗೆ ಮಹತ್ತರ ಸ್ಥಾನವಿದೆ. ಭಾಷಾ ವ್ಯೆರುಧ್ಯಗಳಿಲ್ಲದೆ ಎಲ್ಲರನ್ನೂ ಸ್ವೀಕರಿಸುವ, ಬೆಂಬಲಿಸುವ ಮನೋಭಾವ ನಮ್ಮಲ್ಲಿರಬೇಕು.ತನ್ಮೂಲಕ ನೆಮ್ಮದಿಯ ಸಮಾಜ ನಿರ್ಮಾಣ ಸಾಧ್ಯ ಎಂದು ಕೇರಳ ಬಂದರು, ಪುರಾತತ್ವ ಇಲಾಖೆ ಸಚಿವ ಕಡನ್ನಪ್ಪಳ್ಳಿ ರಾಮಚಂದ್ರನ್ ಹೇಳಿದರು.

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಜಾನಪದ ಪರಿಷತ್, ಕೇರಳ ಗಡಿನಾಡ ಘಟಕ ಕಾಸರಗೋಡು, ಭಾರತ ಭವನ ಆಶ್ರಯದಲ್ಲಿ ತಿರುವನಂತಪುರದ ಭಾರತ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಅನಂತಪುರಿ ಗಡಿ ಕನ್ನಡ ಸಂಸ್ಕೃತಿ ಉತ್ಸವದಲ್ಲಿ ಮಾತನಾಡಿದರು.

ಸಮಾರಂಭವನ್ನು ಉದ್ಘಾಟಿಸಿದ ಕರ್ನಾಟಕ ಜಾನಪದ ಪರಿಷತ್ತು ಕೇಂದ್ರ ಘಟಕದ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ, ಒಳನಾಡಿಗಿಂತ ಗಡಿನಾಡು-ಹೊರನಾಡಿನ ಕನ್ನಡಿಗರಲ್ಲಿ ಭಾಷೆ, ಸಂಸ್ಕೃತಿಯ ಬಗ್ಗೆ ಹೆಚ್ಚು ಒಲವು ಕಂಡುಬರುತ್ತದೆ ಎಂದರು.

ಗಡಿನಾಡು ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಎಸ್. ಪ್ರದೀಪ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಭಾರತ್ ಭವನ್ ಸದಸ್ಯ ಕಾರ್ಯದರ್ಶಿ ಪ್ರಮೋದ್ ಪಯ್ಯನ್ನೂರ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಕರ್ನಾಟಕ ಭೂನ್ಯಾಯ ಮಂಡಳಿ ಸದಸ್ಯ ಗಿರೀಶ್ ಶೆಟ್ಟಿ ಎಂ., ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಪು, ತಿರುವನಂತಪುರದ ಮಾಧ್ವ ಮಹಿಳಾ ಮಂಡಳಿ ಅಧ್ಯಕ್ಷೆ ಡಾ.ರುಕ್ಮಿಣಿ ಕೆ, ತಿರುವನಂತಪುರ ಕರ್ನಾಟಕ ಸಂಘದ ಕಾರ್ಯದರ್ಶಿ ಡಾ. ಅನಿತ ಕುಮಾರಿ ಹೆಗಡೆ, ಕಾಸರಗೋಡಿನ ಕನ್ನಡ ಭವನ ಸಂಸ್ಥಾಪಕ ವಾಮನ ರಾವ್ ಬೇಕಲ ಮತ್ತಿತರರು ಉಪಸ್ಥಿತರಿದ್ದರು.

ಗಡಿನಾಡ ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ ಸ್ವಾಗತಿಸಿ, ಕಾರ್ಯದರ್ಶಿ ಅಖಿಲೇಶ್ ನಗುಮುಗಂ ವಂದಿಸಿದರು. ರವಿ ನಾಯ್ಕಪು ನಿರೂಪಿಸಿದರು. ಸಾಧಕರಾದ ರೆ.ಫಾ.ಬಾಸಿಲ್ ವಾಸ್, ಪ್ರೊ.ಸ್ಟೀಫನ್ ಕ್ವೊಡ್ರೋಸ್, ಶ್ರೀಜಿತ್ ಶ್ರೀಧರ್, ಡಾ.ರತ್ನಾಕರ ಮಲ್ಲಮೂಲೆ, ಡಾ.ಶಕೀರಲಿ ಕೆ.ಎ., ಪತ್ರಕರ್ತ ಗಂಗಾಧರ ತೆಕ್ಕೇಮೂಲೆ, ಅಸ್ಲಂ ಕುಂಜತ್ತೂರು ಅವರನ್ನು ಸನ್ಮಾನಿಸಲಾಯಿತು.

ದ್ವಾದಶಭಾಷಾ ಕವಿಗೋಷ್ಠಿ

ದ್ವಾದಶಭಾಷಾ ಕವಿಗೋಷ್ಠಿ ರಾಜಶ್ರೀ ಟಿ.ರೈ ಅಧ್ಯಕ್ಷತೆಯಲ್ಲಿ ನಡೆಯಿತು. ಪರಿಣಿತ ರವಿ ಎಡನಾಡು ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು. ಸಂಜೆ ಕರ್ನಾಟಕ ಜಾನಪದ ಪರಿಷತ್ತು ಕೇಂದ್ರ ಘಟಕದ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪದಲ್ಲಿ ಕೇರಳ ಆಹಾರ, ನಾಗರಿಕ ಪೂರೈಕೆ ಸಚಿವ ಜಿ.ಆರ್.ಅನಿಲ್ ಸಾಧಕ ಪುರಸ್ಕಾರ ಪ್ರದಾನಗೈದರು. ಮಿತ್ರ ಬಳಗ ಬೆಳ್ಳೂರು ಸಹಿತ ವಿವಿಧ ತಂಡಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net