ಮೆಕ್ಕೆಜೋಳಕ್ಕೆ ಹೆಚ್ಚಿದ ಗಿಳಿಗಳ ಕಾಟ

mkg1a
Published on

ಚನ್ನಗಿರಿ: ತಾಲೂಕಿನ ಸಂತೆಬೆನ್ನೂರು ಹೋಬಳಿಯ ದೊಡ್ಡಬ್ಬಿಗೆರೆ ಹಾಗೂ ಚಿಕ್ಕಬ್ಬಿಗೆರೆ ಗ್ರಾಮಗಳ ಹೊಲಗಳಲ್ಲಿ ಬೆಳೆದಿರುವ ಪಾಪ್‌ಕಾರ್ನ್ ಮೆಕ್ಕೆಜೋಳವನ್ನು ಗಿಳಿಗಳ ಹಿಂಡು ತಿಂದು ನಾಶ ಮಾಡುತ್ತಿರುವುದು ರೈತರಿಗೆ ದೊಡ್ಡ ತಲೆನೋವಾಗಿದೆ.

ಸಂತೇಬೆನ್ನೂರು ಹೋಬಳಿಯಲ್ಲಿ ಸುಮಾರು 650 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಪಾಪ್‌ಕಾರ್ನ್ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಆದರೆ, ನಿತ್ಯ ದಾಳಿ ನಡೆಸುವ ಗಿಳಿಗಳ ಹಿಂಡು ತೆನೆ ಕಾಳುಗಳನ್ನು ಸಂಪೂರ್ಣ ತಿನ್ನುತ್ತಿವೆ.

ಮಳೆಯ ಕಣ್ಣ ಮುಚ್ಚಾಲೆಯಿಂದ ಬೆಳೆದ ಬೆಳೆಗಳು ಒಣಗುತ್ತಿವೆ. ಈ ಸಂದರ್ಭದಲ್ಲಿ ಬೆಳೆ ರಕ್ಷಿಸಿಕೊಳ್ಳಲು ಬೋರ್‌ವೆಲ್‌ನ ಸಹಾಯದಿಂದ ರೈತರು ನೀರನ್ನು ಹಾಯಿಸಿ ಕೊಳ್ಳುತ್ತಿದ್ದಾರೆ. ಇದೀಗ ಅಲ್ಪಸ್ವಲ್ಪ ಬೆಳೆದಿರುವ ಬೆಳೆಯನ್ನು ಗಿಳಿಗಳು ನಾಶಮಾಡುತ್ತಿವೆ.

ಗಿಳಿಹಿಂಡು ತಡೆಗಟ್ಟಲು ರೈತರು ಕೇಕೆ ಹಾಕುವುದು, ಡಬ್ಬದ ಸದ್ದು ಮಾಡುವುದು, ಮೈಕ್‌ನಲ್ಲಿ ಕೂಗುವುದು ಮಾಡುತ್ತಿದ್ದಾರೆ. ಆದರೂ, ಗಿಳಿಗಳ ದಾಳಿ ತಪ್ಪುತ್ತಿಲ್ಲ.

ಈ ಕುರಿತು ಚಿಕ್ಕಬ್ಬಿಗೆರೆ ಹನುಮಂತಪ್ಪ ಮಾತನಾಡಿ, ನಾಲ್ಕು ಎಕರೆ ಜಮೀನಿನಲ್ಲಿ ಪಾಪ್‌ಕಾರ್ನ್ ಬಿತ್ತನೆ ಮಾಡಲಾಗಿದೆ. ಎಕರೆಗೆ ಸುಮಾರು 15 ಸಾವಿರ ರೂ. ಖರ್ಚು ಬಂದಿದೆ. ಬೆಳೆ ಉತ್ತಮವಾಗಿದೆ. ಆದರೆ, ಗಿಳಿಗಳ ಕಾಟಕ್ಕೆ ಬೆಳೆ ಕೈಸಿಗುವುದು ಅನುಮಾನ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net