ಬಿದ್ದು ಹೋದ ಅವಿಶ್ವಾಸ ನಿರ್ಣಯ

tdl_20-1a
ತೇರದಾಳ ಸಮೀಪದ ಸಸಾಲಟ್ಟಿ ಗ್ರಾಪಂ ಮುಂಭಾಗದಲ್ಲಿ ಪೊಲೀಸರೊಂದಿಗೆ ಜಮಖಂಡಿ ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೋಳಿ ಚರ್ಚಿಸಿದರು.
Published on

ತೇರದಾಳ: ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಸಮೀಪದ ಸಸಾಲಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಮಂಡನೆಯಾಗಿದ್ದ ಅವಿಶ್ವಾಸ ನಿರ್ಣಯ ಮತ್ತೊಮ್ಮೆ ವಿಫಲಗೊಂಡಿದ್ದು, ಹಿಂದಿನ ಅಧ್ಯಕ್ಷರೇ ಅಧಿಕಾರದಲ್ಲಿ ಮುಂದುವರಿದಿದ್ದಾರೆ

ಗ್ರಾಮ ಪಂಚಾಯಿತಿಯಲ್ಲಿ ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೋಳಿ ಸಮ್ಮಖದಲ್ಲಿ ಬುಧವಾರ ನಡೆದ ಅವಿಶ್ವಾಸ ನಿರ್ಣಯ ಮಂಡನೆ ಸಭೆಗೆ ಕೇವಲ ೧೩ ಸದಸ್ಯರು ಹಾಜರಾಗಿ ಉಳಿದ ಸದಸ್ಯರು ಗೈರಾದರು. ಹೀಗಾಗಿ ಕೋರಂ ಭರ್ತಿ ಆಗದ ಕಾರಣ ಅವಿಶ್ವಾಸ ನಿರ್ಣಯ ಮಂಡನೆ ಪ್ರಕ್ರಿಯೆ ಬಿದ್ದು ಹೋಯಿತು

ಎಸಿ ಡಾ.ಸಿದ್ದು ಹುಲ್ಲೋಳಿ ಸುದ್ದಿಗಾರರೊಂದಿಗೆ ಮಾತನಾಡಿ, ಜು. ೧ ರಂದು ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಬುಧವಾರ ಸಭೆ ಕರೆಯಲಾಗಿತ್ತು. ಸದಸ್ಯರ ೨/೩ ರಷ್ಟು ಹಾಜರು ಆಧಾರದ ಮೇಲೆ ಹದಿನಾಲ್ಕು ಸದಸ್ಯರ ಕೋರಂ ಭರ್ತಿಯಾಗಲಿಲ್ಲ. ಹೀಗಾಗಿ ಅವಿಶ್ವಾಸ ನಿರ್ಣಯ ಬಿದ್ದು ಹೋಗಿದ್ದು, ಹಿಂದಿನ ಅಧ್ಯಕ್ಷೆ ಈರವ್ವ ಶಿವಲಿಂಗ ನಿರ್ವಾಣಿ ಅವರೇ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳಿದರು

ತೀವ್ರ ಜಿದ್ದಾಜಿದ್ದಿಗೆ ಸಭೆ ಕಾರಣವಾಗಿದ್ದರಿಂದ ಗ್ರಾಪಂ ಆವರಣದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು

ರಾಜಕೀಯ ಜಿದ್ದಾಜಿದ್ದಿ: ಸಸಾಲಟ್ಟಿ ಗ್ರಾಮ ಪಂಚಾಯಿತಿ ಅಧಿಕಾರಕ್ಕಾಗಿ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ಒಟ್ಟು ೨೧ ಸದಸ್ಯರ ಪೈಕಿ ೧೨ ಬಿಜೆಪಿ ಬೆಂಬಲಿತ, ೭ ಕಾಂಗ್ರೆಸ್ ಬೆಂಬಲಿತ, ಇಬ್ಬರು ಸ್ವತಂತ್ರ ಸದಸ್ಯರಿದ್ದಾರೆ. ಈ ಪೈಕಿ ಬಿಜೆಪಿ ಬೆಂಬಲಿತ ಅಧ್ಯಕ್ಷೆ ಈರವ್ವ ಪತಿ ಶಿವಲಿಂಗ ನಿರ್ವಾಣಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರಿಂದ ಸ್ಥಳೀಯ ಆಡಳಿತದಲ್ಲಿ ಬಿರುಸಿನ ಚಟುವಟಿಕೆ ಆರಂಭವಾದವು. ಈರವ್ವ ಅವರನ್ನು ಅಽಕಾರದಿಂದ ಕೆಳಗಿಸಲು ಬಿಜೆಪಿ ಬೆಂಬಲಿತರು ಸತತ ಪ್ರಯತ್ನ ಮಾಡುತ್ತಿದ್ದಾರೆ. ಈಗ ಮತ್ತೊಮ್ಮೆ ಅವಿಶ್ವಾಸ ನಿರ್ಣಯ ಬಿದ್ದು ಹೋಗಿದ್ದರಿಂದ ಮತ್ತಷ್ಟು ಮುಖಭಂಗವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net