

ಬಣಕಲ್: ಸಾಮಾನ್ಯರ ಬದುಕಿನ ವಿವರ ತುಂಬಿರುವ ತೇಜಸ್ವಿ ಕೃತಿಗಳನ್ನು ಮತ್ತೆ ಮತ್ತೆ ಓದಿದಷ್ಟೂ ಹೊಸ ಜಗತ್ತು ತೆರೆದುಕೊಳ್ಳುತ್ತದೆ ಎಂದು ಕನ್ನಡ ಪ್ರಾಧ್ಯಾಪಕಿ ಡಾ. ಸಬಿತಾ ಬನ್ನಾಡಿ ಹೇಳಿದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ 85ನೇ ಜನ್ಮದಿನದ ಅಂಗವಾಗಿ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ಕೊಟ್ಟಿಗೆಹಾರದಲ್ಲಿ ಆಯೋಜಿಸಿದ್ದ ತೇಜಸ್ವಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ತೇಜಸ್ವಿ ತೋರಿದ ಲೋಕದೃಷ್ಟಿ ವಿಷಯದ ಬಗ್ಗೆ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸಿ.ರಮೇಶ್ ಮಾತನಾಡಿ, ತೇಜಸ್ವಿ ಪ್ರತಿಷ್ಠಾನದಿಂದ ತೇಜಸ್ವಿ ಓದಿನ ಮನೆ ನಿರ್ಮಾಣವಾಗಿದೆ. ಪ್ರಕೃತಿ ನಡುವೆ ತೇಜಸ್ವಿ ಕೃತಿಗಳನ್ನು ಓದಲು ಪೂರಕ ವಾತಾವರಣ ಇಲ್ಲಿದೆ. ಪ್ರತಿಷ್ಠಾನದಿಂದ ಚಾರಣ, ವಿಚಾರ ಮಂಥನ, ಚಿತ್ರಕಲಾ, ಫೋಟೋಗ್ರಫಿ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬರಲಾಗುತ್ತಿದೆ ಎಂದು ತಿಳಿಸಿದರು.
ಪುಸ್ತಕ ಪ್ರಕಾಶನದ ಮುಖ್ಯಸ್ಥ ರಾಘವೇಂದ್ರ ಮಾತನಾಡಿ, ತೇಜಸ್ವಿ ಪರಿಸರದ ನಡುವೆ ಬದುಕಿನ ಅನುಭವಗಳನ್ನು ಕೃತಿಗಳಲ್ಲಿ ದಾಖಲಿಸಿದ್ದಾರೆ. ಚಂದ್ರಯಾನ, ಜೀವ ವಿಕಾಸ, ಪರಿಸರ ಮುಂತಾದ ಕ್ಷೇತ್ರಗಳ ಬಗ್ಗೆ ಬೆರಗು ಮೂಡಿಸುವ ವಿವರ ತೇಜಸ್ವಿ ಕೃತಿಗಳಲ್ಲಿವೆ ಎಂದರು.
ಕೊಟ್ಟಿಗೆಹಾರ ಪ್ರೌಢಶಾಲೆ ವಿದ್ಯಾರ್ಥಿಗಳು ತೇಜಸ್ವಿ ಅವರ ಸಾಲುಗಳ ಭಿತ್ತಿಚಿತ್ರ ಪ್ರದರ್ಶಿಸಿದರು. ವಿದ್ಯಾರ್ಥಿ ದರ್ಶನ್ ತೇಜಸ್ವಿ ಅವರಂತೆ ವೇಷ ಧರಿಸಿದ್ದು ಎಲ್ಲರ ಗಮನ ಸೆಳೆಯಿತು. ಕಲಾವಿದ ಹರ್ಷ ಕಾವಾ ನಿರ್ಮಿಸಿದ ಮಾಯಾಲೋಕ ಪ್ರತಿಕೃತಿಗಳು ತೇಜಸ್ವಿ ಅವರ ಪಾತ್ರಗಳ ಲೋಕವನ್ನು ತೆರೆದಿಟ್ಟವು. ತೇಜಸ್ವಿ ಓದಿನ ಗಾಜಿನ ಮನೆಯನ್ನು ಗಣ್ಯರು ವೀಕ್ಷಿಸಿದರು.
ತರುವೆ ಗ್ರಾಪಂ ಅಧ್ಯಕ್ಷ ಬಿ.ಎಂ.ಸತೀಶ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ನಂದೀಶ್ ಬಂಕೇನಹಳ್ಳಿ, ತಾಂತ್ರಿಕ ಸಹಾಯಕ ಪ್ರಜ್ವಲ್, ಸಿಬ್ಬಂದಿ ಸತೀಶ್ ತರುವೆ, ಸಂಗೀತಾ, ಪ್ರಾಧ್ಯಾಪಕರಾದ ಬಿ.ಎಸ್.ದೀಪಾರಾಣಿ, ಡಾ. ಎಂ.ಎಸ್.ನಾಗರಾಜ್, ರವಿಕುಮಾರ್, ಸುಶ್ಮಿತಾ, ಸತೀಶ್, ಕಿರಣ್, ಲೇಖಕ ಕಾರ್ತಿಕ್ ಬೆಳಗೋಡು, ಕಸಾಪ ತಾಲೂಕು ಅಧ್ಯಕ್ಷ ಶಾಂತಕುಮಾರ್, ಹೋಬಳಿ ಅಧ್ಯಕ್ಷ ತರುವೆ ಆದರ್ಶ್, ಮಂಜುನಾಥ್, ಜಾನುವಾರು ಅಧಿಕಾರಿ ಡಾ. ನವೀನ್‌ಕುಮಾರ್, ಗ್ರಾಮಸ್ಥರಾದ ನರೇಂದ್ರ ತರುವೆ, ಸಂಜಯಗೌಡ ಇದ್ದರು.