

ಸವಣೂರ: ರಾಜ್ಯದಲ್ಲಿ ಇನ್ನಷ್ಟು ಉತ್ತಮ ಸಂಘಟನೆ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷರೊಂದಿಗೆ ಸರ್ವ ಮಂಡಳ ಅಧ್ಯಕ್ಷರನ್ನು ನೂತನವಾಗಿ ಆಯ್ಕೆಗೊಳಿಸಲಾಗಿದೆ. ಇದರಿಂದ ಬಿಜೆಪಿಯಲ್ಲಿ ಈಗ ಸಂಘಟನೆಯ ಹೊಸ ಅಲೆ ಆರಂಭಗೊಂಡಿದೆ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಸುಭಾಸ ಗಡೆಪ್ಪನವರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಬಿಜೆಪಿ ಸವಣೂರ ಮಂಡಳ ನೂತನ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ ಅವರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆ ಮತ್ತಷ್ಟು ಗಟ್ಟಿಗೊಳಿಸಲು ಯೋಜನೆ ಸಿದ್ಧಗೊಳಿಸಬೇಕು. ಸರ್ಕಾರದ ಅವೈಜ್ಞಾನಿಕ ಯೋಜನೆಗಳ ವಿರುದ್ಧ ಹೋರಾಟ ಹಾಗೂ ಬಿಜೆಪಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು ಪಕ್ಷದ ಕಾರ್ಯಕರ್ತರ ಪ್ರಮುಖ ಕರ್ತವ್ಯವಾಗಲಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಪುತ್ರಪ್ಪ ಕಲಕೋಟಿ, ಪಕ್ಷ ಸಂಘಟನೆಗಾಗಿ ರಾಜ್ಯ ಹಾಗೂ ಜಿಲ್ಲಾ ಸಮಿತಿ ವತಿಯಿಂದ ಸೂಕ್ತ ಮಾರ್ಗದರ್ಶನ ಪಡೆಯಲಾಗುತ್ತಿದೆ. ನಿಕಟಪೂರ್ವ ಅಧ್ಯಕ್ಷರು, ಪದಾಧಿಕಾರಿಗಳ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಮಂಡಳದಲ್ಲಿ ಪಕ್ಷ ಸಂಘಟನೆಯೊಂದಿಗೆ ವಿವಿಧ ಹಂತದ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಗಾಣಿಗೇರ ಹಾಗೂ ನಿಕಟಪೂರ್ವ ಅಧ್ಯಕ್ಷ ಹನಮಂತಗೌಡ ಮುದಿಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಮೈಲಾರಪ್ಪ ತಳ್ಳಿಹಳ್ಳಿ, ಗಂಗಾಧರ ಬಾಣದ, ಮಹಾಂತೇಶ ಹಾವಣಗಿ, ಸಂಗಮೇಶ ಏರೆಸೀಮಿ, ಮಹೇಶ ಮುದಗಲ್ಲ, ನಿಂಗಪ್ಪ ಮರಗಪ್ಪನವರ, ಗಿರೀಶ ಮಟಿಗಾರ, ಮಹದೇವ ಮಹೇಂದ್ರಕರ, ಪಕ್ಷದ ಕಾರ್ಯಕರ್ತರು, ಇತರರು ಪಾಲ್ಗೊಂಡಿದ್ದರು.