

ಮಧುಗಿರಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ದೂರ ತರಂಗದ ಮೂಲಕ ಶಿಕ್ಷಣ ಕ್ರಾಂತಿ ಮಾಡಲು ಪಾವಗಡ ಶ್ರೀ ರಾಮಕೃಷ್ಣ ಆಶ್ರಮ, ಇನ್ಫೋಸಿಸ್ ಫೌಂಡೇಷನ್, ಸಮರ್ಪಣ ಇನ್ಫೋಸಿಸ್ ಸಿ.ಎಸ್.ಆರ್.(ಸ್ವಯಂ ಸೇವಾ ಸಂಸ್ಥೆ) ಸಹಯೋಗದೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಜ್ಜಾಗಿದೆ.
ಕರೊನಾ ಸಂಕಷ್ಟದಿಂದಾಗಿ ಶಿಕ್ಷಣ ಇಲಾಖೆ ಆನ್‌ಲೈನ್ ತರಗತಿಗಳ ಮೂಲಕ ಕಲಿಕೆಗೆ ಒತ್ತು ನೀಡಲಾಗಿದೆಯಾದರೂ, ಆನ್‌ಲೈನ್ ಶಿಕ್ಷಣದಿಂದ ಸಹಪಾಠಿಗಳೊಂದಿಗೆ ಕುಳಿತು ಪಾಠ ಕೇಳುವ ವಾತಾವರಣ ಕಲ್ಪಿಸಲು ಸಾಧ್ಯವಿಲ್ಲ ಎಂಬುದು ಬಹುತೇಕ ಶಿಕ್ಷಣ ತಜ್ಞರ ಅಭಿಪ್ರಾಯ. ಇದನ್ನು ಮನಗಂಡು ಪಾವಗಡದ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಜಪಾನಂದ ಸ್ವಾಮೀಜಿ ಅವರು ಇನ್ಫೋಸಿಸ್ ಫೌಂಡೇಷನ್ ಸಂಸ್ಥೆ ಅಧ್ಯಕ್ಷೆ ಸುಧಾಮೂರ್ತಿ ಸಹಕಾರದೊಂದಿಗೆ ಶೈಕ್ಷಣಿಕ ಜಿಲ್ಲೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಅತ್ಯಾಧುನಿಕ ಯಂತ್ರೋಪಕರಣಗಳ ಅಳವಡಿಸಿ ತರಂಗ ಶಿಕ್ಷಣ ನೀಡಲು ಯೋಜನೆ ರೂಪಿಸಿದ್ದಾರೆ. ಅದು ಜ.9ರಂದು ಕಾರ್ಯರೂಪಕ್ಕೆ ಬರಲಿದೆ.
ಗ್ರಾಮಾಂತರ ಸರ್ಕಾರಿ ಶಾಲೆ ಮಕ್ಕಳಿಗೆ ಇದರ ಪ್ರಯೋಜನ ದೊರೆಯಲಿದೆ. ಎಲ್ಲ ವಿದ್ಯಾರ್ಥಿಗಳು ಒಟ್ಟಿಗೆ ಕುಳಿತು ಡಿಜಿಟಲ್ ಪರದೆ ಮೂಲಕ ಶಿಕ್ಷಣ ಪಡೆಯಬಹುದು. 10ನೇ ತರಗತಿ ಮಕ್ಕಳಿಗೆ ಸೀಮಿತವಾಗಿರದೆ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೂ ಅನುಕೂಲ ಮಾಡಲಾಗುವುದು. ಇದಕ್ಕಾಗಿ ಪ್ರೊಜೆಕ್ಟರ್, ಡಿಜಿಟಲ್ ಪರದೆ, ಲ್ಯಾಪ್‌ಟ್ಯಾಪ್, ಯುಪಿಎಸ್ ಕೊಡುಗೆಯಾಗಿ ಶಾಲೆಗಳಿಗೆ ನೀಡಲಾಗುತ್ತದೆ.
ಕೌಶಲ ನೈಪುಣ್ಯ, ಸದ್ವಿದ್ಯಾ ಯೋಜನೆ: ಐಟಿಐ ಶಿಕ್ಷಣಕ್ಕೆ ವೆಚ್ಚ ಭರಿಸಲಾರದ ಆಯ್ದ ಬಡ ಮಕ್ಕಳಿಗೆ ಕೌಶಲ ನೈಪುಣ್ಯ ಯೋಜನೆಯಡಿ ಕಾಲೇಜಿನ ವೆಚ್ಚ, ಪಠ್ಯಪುಸ್ತಕ ನೀಡಲು ನಿರ್ಧರಿಸಿದ್ದು, 100 ವಿದ್ಯಾರ್ಥಿಗಳಿಗೆ ಧನಸಹಾಯ ಸಿಗಲಿದೆ. ಈ ಯೋಜನೆಗೆ ಸೇವಾಶ್ರಮದ ಬಸವರಾಜು, ರಕ್ತದಾನಿ ಶಿಕ್ಷಕರ ಬಳಗದ ಶಶಿಕುಮಾರ್ ಸಂಯೋಜಕರಾಗಿದ್ದಾರೆ. ವಿವಿಧ ಕಾರಣದಿಂದ ಶಿಕ್ಷಣ ಮೊಟಕುಗೊಳಿಸಿದ 50 ಬಡ ಹೆಣ್ಣು ಮಕ್ಕಳಿಗೆ ಸದ್ವಿದ್ಯಾ ಯೋಜನೆಯಡಿ ಕಂಪ್ಯೂಟರ್ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗಿದೆ. 3 ಯೋಜನೆಗಳನ್ನು ಇನ್ಫೋಸೀಸ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ರಾಮಕೃಷ್ಣ ಸೇವಾಶ್ರಮ ಅನುಷ್ಠಾನಗೊಳಿಸುತ್ತಿದೆ.
ಮಧುಗಿರಿಯಲ್ಲಿ ಚಾಲನೆ ಏಕೆ?: ಇನ್ಫೋಸಿಸ್ ದಿಗ್ಗಜ ನಾರಾಯಣಮೂರ್ತಿ ಅವರು 1958ರಲ್ಲಿ ಮಧುಗಿರಿ ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 8ನೇ ತರಗತಿ ಓದಿದ್ದರು. ಹೀಗಾಗಿ ಇಲ್ಲಿಂದಲೇ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಸ್ವಾಮೀಜಿ ಬಯಸಿದ್ದಾರೆ. ಜ.9ರ ಮಧ್ಯಾಹ್ನ 12ಕ್ಕೆ ಪ್ರೌಢಶಾಲಾ ವಿಭಾಗದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಜಪಾನಂದಜೀ ಸಾನ್ನಿಧ್ಯ ವಹಿಸಲಿದ್ದಾರೆ, ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕ ಆರ್.ನಾರಾಯಣಮೂರ್ತಿ ಆನ್‌ಲೈನ್‌ನಲ್ಲಿ ಉದ್ಘಾಟಿಸಲಿದ್ದು, ಹಿರಿಯ ಉಪಾಧ್ಯಕ್ಷ ಗುರುರಾಜ್ ದೇಶಪಾಂಡೆ, ಎಸಿ ಸೋಮಪ್ಪ ಕಡಕೋಳ್, ತಹಸೀಲ್ದಾರ್ ಡಾ.ಜಿ.ವಿಶ್ವನಾಥ್, ಡಿಡಿಪಿಐಗಳಾದ ಎಂ.ರೇವಣ ಸಿದ್ದಪ್ಪ, ಸಿ.ನಂಜಯ್ಯ, ಡಿವೈಎಸ್‌ಪಿ ಎಂ.ಪ್ರವೀಣ್ ಪಾಲ್ಗೊಳ್ಳುವರು.
ಎಲ್ಲಿಲ್ಲಿ ಆರಂಭ?: ಮೊದಲಿಗೆ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 4 ತಾಲೂಕುಗಳ 21 ಶಾಲೆಗಳಲ್ಲಿ ದೂರ ತರಂಗ ಶಿಕ್ಷಣಕ್ಕೆ ಚಾಲನೆ ನೀಡಲಾಗುತ್ತಿದೆ. ಮಧುಗಿರಿ ಸರ್ಕಾರಿ ಪಿಯು ಕಾಲೇಜು (ಫ್ರೌಢಶಾಲಾ ವಿಭಾಗ), ಕಡಗತ್ತೂರು, ಕೊಂಡವಾಡಿ, ಐ.ಡಿ.ಹಳ್ಳಿ, ಗಿಡಗಾಗಲಹಳ್ಳಿ, ಚಿಕ್ಕಮಾಲೂರು, ಪಾವಗಡ ತಾಲೂಕಿನ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಬಾಲಕರ ಪಾಠಶಾಲೆ, ಮರಿದಾಸನಹಳ್ಳಿ, ಗೌಡೇಟಿ, ನಾಗಲಮಡಿಕೆ, ವಳ್ಳೂರು, ಶಿರಾ ತಾಲೂಕಿನ ಬರಗೂರು, ಲಕ್ಕನಹಳ್ಳಿ, ಹೊನ್ನಗೊಂಡನಹಳ್ಳಿ, ಚಂಗಾವರ, ಬುಕ್ಕಾಪಟ್ಟಣ ಮತ್ತು ಕೊರಟಗೆರೆ ತಾಲೂಕಿನ ಅರಸಾಪುರ, ಎಲೆರಾಂಪುರ, ಯಲಚಿಗೆರೆ, ಗೊಡ್ರಹಳ್ಳಿ, ಬಿ.ಡಿಪುರ ಸರ್ಕಾರಿ ಪ್ರೌಢಶಾಲೆಗಳಲ್ಲಿ ದೂರ ತರಂಗ ಶಿಕ್ಷಣ ಜಾರಿಯಾಗಲಿದೆ ಎಂದು ಜಪಾನಂದ ಸ್ವಾಮೀಜಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.