

ದಾಂಡೇಲಿ/ಜೊಯಿಡಾ: ಹೊಸ ದೃಷ್ಟಿಕೋನದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಉದ್ಯಮಿಗಳು ಸನ್ನದ್ಧರಾಗಬೇಕು. ಸುಸ್ಥಿರ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂಬ ಅಭಿಪ್ರಾಯ, ವಿಜಯವಾಣಿ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಕಾಳಿ ಪ್ರವಾಸೋದ್ಯಮ ಸಂಸ್ಥೆ, ದಾಂಡೇಲಿ-ಜೋಯಿಡಾ ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲೀಕರ ಸಂಘ, ದಾಂಡೇಲಿ ಟೂರಿಸಂ ಅಸೋಸಿಯೇಷನ್, ಸೂಪಾ ಜಲಸಾಹಸ ಕ್ರೀಡೆ ಅಸೋಸಿಯೇಷನ್, ಲಯನ್ಸ್ ಕ್ಲಬ್ ಆಫ್ ದಾಂಡೇಲಿ ಸಿಟಿ ಸಹಯೋಗದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಸಂವಾದ ನಡೆಯಿತು. ದಾಂಡೇಲಿ ಹಾಗೂ ಜೊಯಿಡಾದ 30 ಅಧಿಕ ರೆಸಾರ್ಟ್, ಹೋಂ ಸ್ಟೇ, ಜಲಸಾಹಸ ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡು ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಆಗಬೇಕಾದ ಕಾರ್ಯಗಳ ಬಗ್ಗೆ ಅಹವಾಲುಗಳನ್ನು ಮಂಡಿಸಿದರು. ಅಧಿಕಾರಿಗಳು ನಿಲುವನ್ನು ವ್ಯಕ್ತಪಡಿಸಿದರು.
ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜಯಂತ್ ಎಚ್.ವಿ. ಮಾತನಾಡಿ, ಉತ್ತರ ಕನ್ನಡ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ನಿಯಂತ್ರಣ ಸಂಬಂಧ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಒಂದನ್ನು ರಚಿಸಲಾಗುತ್ತಿದೆ. ಶೀಘ್ರದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನೀತಿಯ ಅಂಶಗಳನ್ನು ಟಾಸ್ಕ್ ಫೋರ್ಸ್ ಸಮಿತಿಯ ಮೂಲಕ ಜಾರಿಗೆ ತರಲಾಗುವುದು. ನೀತಿಯಂತೆ ಹೋಂ ಸ್ಟೇಗಳು ಪ್ರಾರಂಭವಾಗಿ 6 ತಿಂಗಳ ಒಳಗೆ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹಾಗೆ ಮಾಡದೇ ಇರುವ ಸಂಸ್ಥೆಗಳ ವಿರುದ್ಧ ಕ್ರಮ ವಹಿಸಲಾಗುವುದು ಎಂದು ವಿವರಿಸಿದರು. ಮಿತಿ ಮತ್ತು ಅವಧಿ ಮೀರಿ ಧ್ವನಿ ವರ್ಧಕಗಳ ಬಳಕೆಗೆ ಕಡಿವಾಣ ಹಾಕಬೇಕು. ಮರಗಳ ಮೇಲೆ ಎಲ್‌ಇಡಿ ಬಳಕೆ ನಿಲ್ಲಿಸಬೇಕು ಎಂದು ಸೂಚಿಸಿದರು.
ಜಿಲ್ಲೆ ಪ್ರಾಕೃತಿಕವಾಗಿ ಸಾಕಷ್ಟು ಸಮೃದ್ಧವಾಗಿದೆ. ಕಾಡು, ಪ್ರಾಣಿ, ಪಕ್ಷಿಗಳ ಜತೆ, ಸಮುದ್ರ, ಜಲಪಾತ ಹೀಗೆ ಎಲ್ಲವೂ ಇದೆ. ಇಂಥ ಯಾವುದೇ ಸೌಲಭ್ಯ ಇಲ್ಲದ ಬೆಂಗಳೂರು, ಹಾವೇರಿ ಮುಂತಾದ ಪ್ರದೇಶಗಳಲ್ಲಿ ವಿನೂತನ ಚಟುವಟಿಕೆಗಳ ಮೂಲಕ ಪ್ರವಾಸಿಗರನ್ನು ಹಿಡಿದಿಟ್ಟುಕೊಳ್ಳುತ್ತಿದ್ದಾರೆ. ದಾಂಡೇಲಿ, ಜೊಯಿಡಾ ಭಾಗದ ಪ್ರವಾಸೋದ್ಯಮಿಗಳು, ಕೇವಲ ರಿವರ್ ರ‌್ಯಾಫ್ಟಿಂಗ್, ಸಫಾರಿಗೆ ಮಾತ್ರ ಸೀಮಿತವಾಗಿರದೇ ಬುಡಕಟ್ಟು ಸಂಸ್ಕೃತಿಯನ್ನು ಬಿಂಬಿಸುವ ಚಟುವಟಿಕೆಗಳನ್ನು ಆಯೋಜಿಸಿ. ಟ್ರೈಬಲ್ ಟೂರಿಸಂ ಬಗ್ಗೆ ಇಲಾಖೆಯಿಂದ ತರಬೇತಿ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಕರಾವಳಿಯನ್ನು ಜೋಡಿಸಿಕೊಂಡು ಟೂರಿಸಂ ಪ್ಯಾಕೇಜ್ ಯೋಜನೆ ಮಾಡಿಕೊಳ್ಳಿ. ಜಿಲ್ಲೆಯಲ್ಲಿ 40 ಪ್ರಮುಖ ಜಲಪಾತಗಳಿವೆ. ಇನ್ನೂ ಪ್ರವಾಸಿಗರಿಗೆ ತೆರೆದುಕೊಳ್ಳದ 150ಕ್ಕೂ ಹೆಚ್ಚು ಜಲಪಾತಗಳು ಜಿಲ್ಲೆಯ ವಿವಿಧೆಡೆ ಇದ್ದು, ಅವುಗಳ ಬಗ್ಗೆ ಸುಲಭ ಮಾಹಿತಿ ಪಡೆಯಲು ಅನುಕೂಲವಾಗುವಂತೆ ಜಿಲ್ಲಾಡಳಿತದಿಂದ ಕಾಫಿ ಟೇಬಲ್ ಬುಕ್ ಒಂದನ್ನು ತರಲಾಗುವುದು ಎಂದರು.
ಇಂಡಿಯಾ ಟೂರಿಸಂನಲ್ಲಿ ಸಾಕಷ್ಟು ಅನುದಾನವಿದೆ. ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳಲ್ಲಿ ಕೆಲಸ ಮಾಡುವ ಪ್ರಂಟ್ ಆಫೀಸ್ ಸಿಬ್ಬಂದಿಗೆ, ಪ್ರವಾಸೋದ್ಯಮ ಗೈಡ್‌ಗಳಿಗೆ ತರಬೇತಿ ನೀಡಲು ಅವಕಾಶವಿದೆ. ಹೋಂ ಸ್ಟೇ, ರೆಸಾರ್ಟ್, ಜಲಸಾಹಸ ಕ್ರೀಡಾ ಮಾಲೀಕರು ಸಂಘಟನೆಗಳನ್ನು ಮಾಡಿಕೊಂಡು, ಅವುಗಳನ್ನು ನೋಂದಾಯಿಸಿ, ಪ್ರಸ್ತಾವನೆ ಕಳಿಸಿ, ದಾಂಡೇಲಿ, ಪ್ರವಾಸೋದ್ಯಮ ಸಂಸ್ಥೆಗಳು ತಮ್ಮಲ್ಲಿ ಭೇಟಿ ನೀಡುವ ಪ್ರವಾಸಿಗರ ಅಂಕಿ ಅಂಶವನ್ನು ಇಲಾಖೆಗೆ ಒದಗಿಸಬೇಕು. ಆಗ ಇಲಾಖೆಗಳಿಂದ ಬರುವ ಪ್ರಯೋಜನಗಳಿಗೆ ಪ್ರಸ್ತಾವನೆ ಕಳಿಸಲು, ಸರ್ಕಾರದಿಂದ ಅನುದಾನ ತರಲು ಅನುಕೂಲವಾಗುತ್ತದೆ ಎಂದರು.
ವಿಜಯವಾಣಿ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಜಯವಾಣಿ ನಿತ್ಯ ನೂತನ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಎಜುಕೇಶನ್ ಎಕ್ಸ್‌ಪೋ, ಪ್ರಾಪರ್ಟಿ ಎಕ್ಸ್‌ಪೋ, ಅಷ್ಟ ವಿನಾಯಕ ಸ್ಪರ್ಧೆ, ರೈತರ ಕಾರ ಹುಣ್ಣುಮೆಯಂಥ ಹೊಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದರ ಭಾಗವಾಗಿ ಪ್ರವಾಸೋದ್ಯಮ ದಿನದ ಅಂಗವಾಗಿ ಇದೇ ಮೊದಲ ಬಾರಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದು ಕೇವಲ ವೇದಿಕೆ ಕಾರ್ಯಕ್ರಮ, ಭಾಷಣಕ್ಕೆ ಸೀಮಿತವಾಗದೆ, ಅಧಿಕಾರಿಗಳು ಹಾಗೂ ಪ್ರವಾಸೋದ್ಯಮಿಗಳು ಮುಖಾಮುಖಿಯಾಗಿ ಚರ್ಚಿಸಲು ವೇದಿಕೆ ಕಲ್ಪಿಸಿಕೊಡಲಾಗಿದೆ ಎಂದರು.
ವಿಜಯವಾಣಿ ಜಿಲ್ಲಾ ವರದಿಗಾರ ಸುಭಾಸ ಧೂಪದಹೊಂಡ ಸ್ವಾಗತಿಸಿದರು. ದಾಂಡೇಲಿ ವರದಿಗಾರ ಯು.ಎಸ್. ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಜೊಯಿಡಾ ವರದಿಗಾರ ಗಿರೀಶ ಪಾಟೀಲ ವಂದಿಸಿದರು. ಧಾರವಾಡ ಹಿರಿಯ ವರದಿಗಾರ ಮಂಜುನಾಥ ಅಂಗಡಿ, ಜಾಹೀರಾತು ವಿಭಾಗದ ವ್ಯವಸ್ಥಾಪಕ ಶಂಕರ ಜಾವೂರ ಸಹಕರಿಸಿದರು.