

ಅಳವಿನಂಚಿನಲ್ಲಿರುವ ಶಿಳ್ಳೇಕ್ಯಾತ ಸಮುದಾಯದ ‘ತೊಗಲುಗೊಂಬೆ ಆಟ’ಕ್ಕೆ ಹೊಸ ಮೆರುಗು ನೀಡುವ ಕೆಲಸ ಮೈಸೂರಿನಲ್ಲಿ ನಡೆಯುತ್ತಿದೆ.
ಸಂಚಲನ ಮೈಸೂರು ಮತ್ತು ಧಾರವಾಡದ ಪಪೆಟ್ ಹೌಸ್ (ಗೊಂಬೆಮನೆ) ಈ ಪ್ರಯೋಗಕ್ಕೆ ಮುಂದಾಗಿವೆ. ಎರಡೂವರೆ ದಶಕಗಳಿಂದ ರಂಗಭೂಮಿ, ಗೊಂಬೆಯಾಟದಲ್ಲಿ ಪರಿಣತಿ ಸಂಪಾದಿಸಿರುವ ರಜನಿ ಗರುಡ ಅವರು ಮೈಸೂರಿನ ಧ್ವನ್ಯಾಲೋಕದಲ್ಲಿ ರಂಗಭೂಮಿ ಕಲಾವಿದರಾದ ಬಿ.ರಾಜೇಂದ್ರ, ಕಾವ್ಯಾ, ಬಿ.ಪಿ.ಗೌತಮ್ ಮತ್ತು ರಾಜು ಗದಗ ಅವರಿಗೆ ತೊಗಲುಗೊಂಬೆ ಕಲಿಸುತ್ತಿದ್ದಾರೆ.
ಶತಮಾನಗಳ ಇತಿಹಾಸ ಇರುವ ಈ ಕಲೆಯನ್ನು ಶಿಳ್ಳೇಕ್ಯಾತ ಸಮುದಾಯದವರು ಮಾತ್ರ ಮುಂದುವರಿಸಬೇಕೇ? ಉಳಿದವರು ಕಲಿಯಬಾರದೇ? ಎಂಬ ಪ್ರಶ್ನೆಯೊಂದಿಗೆ ಮಾತುಕತೆ ಆರಂಭಿಸಿದ ರಜನಿ ಗರುಡ, ವಿಭಿನ್ನ ಸ್ತರದ ಜನರು, ಕಲಾವಿದರು ತೊಗಲುಗೊಂಬೆ ಕಲೆ ಕಲಿಯುವುದರಿಂದ ಈ ಕಲೆಗೆ ಬೇರೊಂದು ಆಯಾಮವೇ ದೊರೆಯುತ್ತದೆ. ಮುಂದಿನ ತಲೆಮಾರಿಗೂ ಉಳಿಯುತ್ತದೆ. ಆ ನಿಟ್ಟಿನಲ್ಲಿ ನಮ್ಮದು ಅಳಿಲು ಸೇವೆ ಎಂದರು.
15-16ನೇ ಶತಮಾನ (ಭಕ್ತಿ ಪರಂಪರೆ ಉತ್ತುಂಗದ ಕಾಲ)ದಲ್ಲಿ ತೊಗಲುಗೊಂಬೆ ಆಟ ಪ್ರಸಿದ್ಧಿಗೆ ಬಂದಿತು. ಜನರಿಗೆ ಸರಳವಾಗಿ ಜೀವನದ ತತ್ವ ತಿಳಿಸಲು ಹುಟ್ಟಿಕೊಂಡ ಕಲಾ ಮಾಧ್ಯಮವಿದು. ಅಲೆಮಾರಿ ಜನರು ಈ ಆಟವನ್ನು ಬೆಳೆಸಿದರು. ಬೆಳಗಲ್ ವೀರಣ್ಣ, ಹೆಡ್ಡರಾಮನಹಳ್ಳಿ ದೊಡ್ಡಭರಮಪ್ಪ, ನಾಗಮಂಗಲದ ಗೊಂಬೆಗೌಡ ಅವರದು ಈ ಪರಂಪರೆಯಲ್ಲಿ ಬಹಳ ದೊಡ್ಡ ಹೆಸರು ಎಂದು ರಜನಿ ಕಲೆಯ ಇತಿಹಾಸವನ್ನು ಸ್ಥೂಲವಾಗಿ ವಿವರಿಸಿದರು.
ಬೆಂಗಳೂರಿನ ಇಂಡಿಯನ್ ಫೌಂಡೇಷನ್ ಫಾರ್ ದಿ ಆರ್ಟ್ಸ್ ಧನಸಹಯೋಗದಲ್ಲಿ 1997ರಲ್ಲಿ ಧಾರವಾಡದ ಪಪೆಟ್ ಹೌಸ್ ಆರಂಭಿಸಿದೆವು. 2 ದಶಕಗಳಿಂದ ಮಹಾಮಾಯಿ, ಚೂರಿಕಟ್ಟೆ, ಜಡಭರತನ ಕನಸುಗಳು, ಶೂದ್ರತಪಸ್ವಿ, ಸಿರಿಸಂಪಿಗೆ, ಅಂಜುಮಲ್ಲಿಗೆ, ಬೆತ್ತಲೆವೇಷ, ಶಿವರಾತ್ರಿ, ವಿಷಮ ವಿವಾಹ ನಾಟಕಗಳನ್ನು ಪ್ರದರ್ಶಿಸಿದ್ದೇವೆ. ಪುಷ್ಪರಾಣಿ, ಪಂಜರ ಶಾಲೆ, ಅಕಟವಿಕಟ ವಿಲಕ್ಷಣ, ಹಕ್ಕಿ ಬೆಕ್ಕಿನಾಟ, ರಂಗೀಲಾ ರಾಜನ ರಂಗುರಂಗಿನ ವೇಷ, ಧಾಂ ಧಾಂ ಸುಂಟರಗಾಳಿ, ಹಕ್ಕಿಹಾಡು, ಅಂಚೆಮನೆ ಮಕ್ಕಳ ನಾಟಕ ಸೇರಿದಂತೆ ಈವರೆಗೆ 500ಕ್ಕೂ ಹೆಚ್ಚು ಪ್ರದರ್ಶನ ನೀಡಿರುವುದಾಗಿ ಅವರು ವಿವರಿಸಿದರು.
ಎಲ್ಲ ಕಲೆಗಳಿಗೂ ಭೂಮಿಕೆಯಾಗಿರುವ ಮೈಸೂರಿನಲ್ಲಿ ಪ್ರದರ್ಶನ ನೀಡುವ ಉದ್ದೇಶದಿಂದ ಕಂದಗಲ್ ಹನುಮಂತರಾಯರ ‘ಅದ್ಭುತ ರಾಮಾಯಣ ನಾಟಕ’ ಆಯ್ಕೆ ಮಾಡಿಕೊಂಡಿದ್ದೇವೆ. ಈ ಕೃತಿಯನ್ನು ಗೊಂಬೆಯಾಟಕ್ಕೆ ಡಾ. ಪ್ರಕಾಶ ಗರುಡ ಪಠ್ಯಕರೀಸಿದ್ದಾರೆ. ರಾಘವ್ ಕಮ್ಮಾರ್ ಸಂಗೀತ, ಶ್ರೀನಿವಾಸಲು ಗೊಂಬೆ ವಿನ್ಯಾಸ ಮಾಡಿದ್ದಾರೆ ಎಂದು ತಮ್ಮ ತಂಡದ ವಿವರ ನೀಡಿದರು.
ಅದ್ಭುತ ರಾಮಾಯಣ ನಾಟಕದಲ್ಲಿ ಸೀತೆ ಕೇಂದ್ರದಲ್ಲಿದ್ದಾಳೆ. ಲಂಕೆಯ ದಶಕಂಠ ರಾವಣನನ್ನು ಕೊಂದ ಶ್ರೀರಾಮನಿಗೆ ಪಾತಾಳ ಲೋಕದ ಶತಕಂಠ ರಾವಣನನ್ನು ಕೊಲ್ಲುವುದು ಅಸಾಧ್ಯವಾಗಿರುತ್ತದೆ. ಕಂಟಕನಾದ ಶತಕಂಠ ರಾವಣನ ವಧೆಗೆ ಸೀತೆ ಕಾಳಿ ಅವತಾರ ಎತ್ತುತ್ತಾಳೆ. ಇದರಲ್ಲಿ ಸೀತೆ ಧನುರ್ಧಾರಿಣಿಯಾಗುತ್ತಾಳೆ ಎಂದು ನಾಟಕದ ಕಥಾವಸ್ತು ವಿವರಿಸಿದರು.
ರಂಗದ ಮೇಲೆ ಅಭಿನಯಿಸಿದ್ದೆ. ಈಗ ಪರದೆ ಹಿಂದೆ ಅಭಿನಯಿಸುವುದನ್ನು ಕಲಿಯುತ್ತಿದ್ದೇನೆ. ನೋಡುವವರಿಗೆ ಗೊಂಬೆಯಾಟ ಖುಷಿ ತರುತ್ತದೆ. ದಟ್ಟವಾದ ಅನುಭವವನ್ನೂ ನೀಡುತ್ತದೆ.ರಾಜೇಂದ್ರಕಲಾವಿದ ಅಳವಿನಂಚಿನಲ್ಲಿರುವ ಗೊಂಬೆಯಾಟ ಪ್ರದರ್ಶನವನ್ನು ಮೈಸೂರಿನಲ್ಲಿ ಏರ್ಪಡಿಸಿರುವುದು ಸಂಭ್ರಮದ ಸಂಗತಿ. ಈ ಕಲೆಗೆ ಸಾಂಸ್ಕೃತಿಕ ನಗರಿಯ ಜನರು ಪ್ರೋತ್ಸಾಹ ಕೊಡಬೇಕೆಂಬ ಮನವಿಯೂ ಇದೆ. ಆ. 9ರಂದು ಧ್ವನ್ಯಾಲೋಕದಲ್ಲಿ ಆರಂಭಿಕ ಪ್ರದರ್ಶನ, 13ರಂದು ರಂಗಾಯಣದಲ್ಲಿ ಪ್ರದರ್ಶನ ಏರ್ಪಡಿಸಿದ್ದೇವೆ.ದೀಪಕ್ ಮೈಸೂರುಹಿರಿಯ ರಂಗಕರ್ಮಿ