

ಕೋಲಾರ : ನಗರ ದೇವತೆ, ಚೋಳರ ಕಾಲದ ಇತಿಹಾಸ ಹೊಂದಿರುವ ಶ್ರೀ ಕೋಲಾರಮ್ಮ ದೇವಿಯ ದೇವಾಲಯದ ಎದುರಿನ ರಥಬೀದಿಗೆ ಹೊಸ ಕಾಯಕಲ್ಪ ದೊರೆತಿದೆ. ಹಲವು ವರ್ಷಗಳ ಕಾಲ ಅವ್ಯವಸ್ಥೆಗಳ ಆಗರಗಳಿಂದ ತುಂಬಿ, ಕಡೆಗಣನೆಗೊಳಗಾದ ರಥಬೀದಿ, ಈಗ ರಾಜಬೀದಿಯಂತೆ ಕಂಗೊಳಿಸುತ್ತಿದೆ. ಹಲವು ದಶಕಗಳ ಕನಸಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರ ಇಚ್ಛಾಶಕ್ತಿ ಮತ್ತು ವೈಯಕ್ತಿಕ ಆಸಕ್ತಿಯಿಂದ ಮೂಲ ಸೌಕರ್ಯ ಸೇವೆ ರಸ್ತೆಗೆ ಹೊಸ ಸ್ಪರ್ಶ ನೀಡಲಾಗಿದೆ.
ಸಂಕಲ್ಪದ ಫಲ: ಆರು ತಿಂಗಳ ಹಿಂದೆ ಕೋಲಾರಕ್ಕೆ ಜಿಲ್ಲಾಧಿಕಾರಿಯಾಗಿ ಆಗಮಿಸಿದ ಡಾ.ಎಂ.ಆರ್.ರವಿ ಅವರು, ಅಧಿಕಾರ ಸ್ವೀಕರಿಸಿದ ಕೂಡಲೇ ಕೋಲಾರಮ್ಮನ ದರ್ಶನಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ದೇವಾಲಯದ ಆವರಣ ಮತ್ತು ಸುತ್ತಮುತ್ತಲಿನ ರಥಬೀದಿಯ ದುಸ್ಥಿತಿ ಗಮನಿಸಿ, ತಕ್ಷಣವೇ ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಿದ್ದರು. ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಕರ್ತರ ಸಂವಾದ ಸಭೆಯಲ್ಲಿ ಈ ಕುರಿತು ಭರವಸೆ ನೀಡಿದ್ದರು. ಅಂದಿನಿಂದ ಈ ಕನಸು ನನಸಾಗುವತ್ತ ಸಾಗಿತು. ಸುಮಾರು 94 ಲಕ್ಷ ರೂಪಾಯಿ ವೆಚ್ಚದಲ್ಲಿ, ಮುಜರಾಯಿ ಇಲಾಖೆಯ ಮೇಲುಸ್ತುವಾರಿ ಮತ್ತು ನಗರಸಭೆಯ ಸಹಯೋಗದಲ್ಲಿ ರಥಬೀದಿಯ ಆಧುನೀಕರಣ ಕಾರ್ಯ ಪೂರ್ಣಗೊಂಡಿದೆ.
ಅಭಿವೃದ್ಧಿ ಕಾರ್ಯಗಳು : ರಥಬೀದಿಯ ಆಧುನೀಕರಣ ಕೇವಲ ರಸ್ತೆ ಸುಧಾರಣೆಗೆ ಸೀಮಿತವಾಗಿಲ್ಲ. ವಿಶಾಲವಾದ ಪಾದಚಾರಿ ಮಾರ್ಗ ನಿರ್ಮಿಸಲಾಗಿದ್ದು, ಭಕ್ತರು ರಥವನ್ನು ಸುಲಭವಾಗಿ ದರ್ಶಿಸಬಹುದು. ನ್ಯಾಯಾಲಯ ವೃತ್ತದಲ್ಲಿ ಭವ್ಯ ಪ್ರವೇಶದ್ವಾರ, ನಿಮಾರ್ಣಗೊಂಡಿದೆ. ದೇವಾಲಯದ ಆವರಣದಲ್ಲಿ ಭಕ್ತರ ಧ್ಯಾನ ಮತ್ತು ಪ್ರಾರ್ಥನೆಗೆ ಅನುಕೂಲವಾಗುವಂತೆ 10 ಕಲ್ಲಿನ ಬೆಂಚು ಅಳವಡಿಸಲಾಗಿದೆ. ಭಕ್ತರ ವಾಹನ ನಿಲುಗಡೆಗೆ ಅನುಕೂಲವಾಗುವಂತೆ ದೇವಾಲಯದ ಎದುರಿಗಿದ್ದ ಅವ್ಯವಸ್ಥಿತ ಅಂಗಡಿಗಳನ್ನು ತೆರವುಗೊಳಿಸಿ, ಭಕ್ತರಿಗೆ ಶೌಚಗೃಹಗಳು ಮತ್ತು ಚಪ್ಪಲಿ ಸ್ಟ್ಯಾಂಡ್ ಸಹ ನಿರ್ಮಿಸಲಾಗಿದೆ. ಡಿಸಿ ಡಾ. ಎಂ.ಆರ್. ರವಿ ಅವರು ಹಲವು ಬಾರಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಸಲಹೆ&ಸೂಚನೆ ನೀಡುವ ಮೂಲಕ ವೈಯಕ್ತಿಕ ಆಸಕ್ತಿ ಪ್ರದರ್ಶಿಸಿದ್ದರು.