ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಕುವೆಂಪು ಹೋರಾಟ ಸಮಿತಿಯಿಂದ ಬೃಹತ್​ ಪ್ರತಿಭಟನೆ: ದೇವೇಗೌಡ, ಡಿಕೆಶಿ, ಸ್ವಾಮೀಜಿಗಳು ಭಾಗಿ

new Text book Revision againest protest
Published on

ಬೆಂಗಳೂರು: ನೂತನ ಪಠ್ಯ ಪುಸ್ತಕ ಪರಿಷ್ಕರಣೆಗೆ ವಿರೋಧ ಮತ್ತು ಕುವೆಂಪು ಅವರಿಗೆ ಅವಮಾನ ಖಂಡಿಸಿ ಕುವೆಂಪು ಹೋರಾಟ ಸಮಿತಿಯು ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಶ್ರೀ ನಂಜಾವಧೂತ ಸ್ವಾಮೀಜಿ, ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಸಾಥ್​ ನೀಡಿದ್ದಾರೆ.

ಶನಿವಾರ ಬೆಳಗ್ಗೆ ಮೆಜೆಸ್ಟಿಕ್​ ರೈಲು ನಿಲ್ದಾಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ, ಫ್ರೀಡಂ ಪಾರ್ಕ್​ ತಲುಪಿತು. 'ಜೈ ವಿಶ್ವಮಾನವ' ಎಂದು ಬರೆದಿರುವ , 'ನೇಗಿಲು ಚಿತ್ರ' ಇರುವ ಬಾವುಟವನ್ನು ಹೋರಾಟಗಾರರು ಹಾರಿಸಿದರು. ಬುದ್ಧ, ಬಸವಣ್ಣ, ಕುವೆಂಪು ಅವರ ತತ್ವ ಸಾರುವ ಈ ಬಾವುಟವನ್ನು ಹಿಡಿದ ದೇವೇಗೌಡರು, ಡಿಕೆಶಿ, ನಂಜಾವಧೂತ ಶ್ರೀಗಳು, 'ಜೈ ವಿಶ್ವಮಾನವ' ಎಂದು ಘೋಷಣೆ ಕೂಗಿದರು.

ನೂತನವಾಗಿ ಪರಿಷ್ಕರಣೆ ಆಗಿರುವ ಪಠ್ಯ ಪುಸ್ತಕವನ್ನು ಹರಿದು ಹಾಕಿ ಡಿಕೆಶಿ ಆಕ್ರೋಶ ಹೊರಹಾಕಿದರು. ಪರಿಷ್ಕರಣೆ ಆಗಿರುವ ನೂತನ ಪಠ್ಯ ಪುಸ್ತಕ ವಿರೋಧಿಸಿ ಜನರು ಸಹಿ ಮಾಡಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಸಿಎಂ ಬಂದು ನಮ್ಮ ಹಕ್ಕೊತ್ತಾಯ ಸ್ವೀಕರಿಸಬೇಕು. ಅಲ್ಲಿಯವೆಗೂ ನಾವು ಇಲ್ಲೇ ಇರುತ್ತೇವೆ ಎಂದು ಸ್ವಾಮೀಜಿಗಳು ಮತ್ತು ದೇವೇಗೌಡರು ಪೊಲೀಸರಿಗೆ ಹೇಳಿದರು. 'ಪಠ್ಯಪುಸ್ತಕ ಪರಿಷ್ಕರಣೆ ವಾಪಸ್ ಪಡೆಯಬೇಕು ಎಂಬ ಬೇಡಿಕೆ ಇರುವುದರಿಂದ ಸ್ಥಳಕ್ಕೆ ಬರುವುದಿಲ್ಲ ಎಂಬುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ' ಎಂದು ಶ್ರೀ ನಂಜಾವಧೂತ ಸ್ವಾಮೀಜಿ ಮತ್ತು ದೇವೇಗೌಡ ಅವರಿಗೆ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದರು.

ಬಳಿಕ ಹಕ್ಕೊತ್ತಾಯದ ಮನವಿಪತ್ರವನ್ನು ದೇವೇಗೌಡರ ಮೂಲಕ ಸರ್ಕಾರಕ್ಕೆ ಕಳುಹಿಸಲು ಪ್ರತಿಭಟನಾರು ನಿರ್ಧರಿಸಿದರು. ವೇದಿಕೆಯಲ್ಲಿದ್ದ ಮಠಾಧೀಶರು, ರಾಜಕೀಯ ಮುಖಂಡರು, ಬರಹಗಾರರು ಮತ್ತು ಹೋರಾಟಗಾರರು ಮನವಿಪತ್ರವನ್ನು ದೇವೇಗೌಡರಿಗೆ ಹಸ್ತಾಂತರಿಸಿದರು.

ಇನ್ನು ಪ್ರತಿಭಟನಾ ವೇದಿಕೆಯಲ್ಲೇ ಎಚ್​ಡಿಡಿ ಮತ್ತು ಡಿಕೆಶಿ ಪರಸ್ಪರ ಹಸ್ತಲಾಘವ ಮಾಡಿಕೊಂಡು ಗಮನ ಸೆಳೆದರು. ಸಮ್ಮಿಶ್ರ ‌ಸರ್ಕಾರ ಹೋದಾಗಿನಿಂದ ಮುಖಾಮುಖಿಯಾಗದ ದೇವೇಗೌಡ ಮತ್ತು ಡಿ.ಕೆ.ಶಿವಕುಮಾರ್​, ಇದೇ ಮೊದಲ ಬಾರಿಗೆ ಹಸ್ತಲಾಘವ ಮಾಡಿಕೊಂಡು ಫೋಟೋಗೆ ಪೋಸ್​ ಕೊಟ್ಟರು.

ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಚಲವಾದಿ ಸಂಸ್ಥಾನದ ಬಸವನಾಗಿದೇವ ಶ್ರೀಗಳು, ಮೈಸೂರಿನ ಉರಿಲಿಂಗಪೆದ್ದ ಶ್ರೀಗಳು, ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕರಾದ ಡಾ.ಎಚ್​.ಎನ್​. ರಂಗನಾಥ್, ಸಿ.ಎನ್​. ಬಾಲಕೃಷ್ಣ, ಎಂ.ಕೃಷ್ಣಪ್ಪ, ಸಂಗೀತ ನಿರ್ದೇಶಕ ಹಂಸಲೇಖ, ಕರವೇ ನಾರಾಯಣ ಗೌಡ, ಶಿವರಾಮೇಗೌಡ, ಪ್ರವೀಣ್ ಶೆಟ್ಟಿ, ನಿರ್ಮಾಪಕ ಸಾ.ರಾ.ಗೋವಿಂದು, ಮುಖ್ಯಮಂತ್ರಿ ಚಂದ್ರು, ಅಕೈ‌ ಪದ್ಮಾಶಾಲಿ, ರಾಮಲಿಂಗಾರೆಡ್ಡಿ, ಹಿರಿಯ ವಕೀಲ ಹನುಮಂತರಾಯಪ್ಪ, ಸಿ.ಎಸ್.ದ್ವಾರಕನಾಥ್ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net