

ಸಾಗರ: ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಪ್ರತಿಯೊಬ್ಬರೂ ಹೆಚ್ಚು ಅಧ್ಯಯನಶೀಲರಾಗಬೇಕು. ಕೃತಿಗಳನ್ನು ಓದುವ ಮೂಲಕ ಹೊಸ ಹೊಳವುಗಳು ಮೂಡುತ್ತವೆ ಎಂದು ಸಾಹಿತಿ ಡಾ. ನಾ.ಡಿಸೋಜ ಹೇಳಿದರು.
ಗುರುಭವನದಲ್ಲಿ ತಾಲೂಕು ಕಸಾಪ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸ್ಟ್ಯಾನಿ ಲೋಪಿಸ್ ಅವರ ನೆನಪು ಮಕ್ಕಳ ಕಥಾ ಸಂಕಲನ ಹಾಗೂ ಬರುವಳು ಕಾದಂಬರಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಓದು ನಮ್ಮನ್ನು ಅತ್ಯಂತ ಗಟ್ಟಿಗೊಳಿಸುತ್ತದೆ. ಹೊಸ ಹೊಸ ವಿಷಯಗಳನ್ನು ತಿಳಿದು ಕೊಳ್ಳುವ ಮೂಲಕ ಬರವಣಿಗೆಯಲ್ಲಿ ಪ್ರೌಢತೆ ಮೂಡುತ್ತದೆ. ಸಿಕ್ಕ ಅವಕಾಶಗಳನ್ನು ಹೊಸ ಲೇಖಕರು ಬಳಿಸಿಕೊಳ್ಳಬೇಕು. ಸ್ಟ್ಯಾನಿ ಲೋಪಿಸ್ ಶಿಕ್ಷಕ ವೃತ್ತಿಯ ಜತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಕೊಂಕಣಿ ಭಾಷಿಕರಾದರೂ ಕನ್ನಡದಲ್ಲಿ ಉತ್ತಮ ಕೃತಿಗಳನ್ನು ನೀಡುವ ಪ್ರಯತ್ನ ನಡೆಸುತ್ತಿದ್ದಾರೆ. ಯಾವ ಲೇಖಕನಿಗೆ ಭಾಷೆಯ ಮೇಲೆ ಹಿಡಿತ ಇರುತ್ತದೆಯೋ ಆತ ಉತ್ತಮ ಸಾಹಿತ್ಯ ರಚನೆ ಮಾಡಲು ಸಾಧ್ಯವಿದೆ. ಅಂತಹ ಪ್ರಯತ್ನ ಸ್ಟ್ಯಾನಿ ಲೋಪಿಸ್ ಮಾಡುತ್ತಿದ್ದು ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ. ಕಥೆ, ಕಾದಂಬರಿ, ಕಾವ್ಯ ಆಧುನಿಕ ತಂತ್ರಜ್ಞಾನದ ಮಧ್ಯೆ ದೂರ ಸರಿಯುತ್ತಿವೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸಾಹಿತ್ಯ ಲೋಕಕ್ಕೆ ಹೊಸದನ್ನು ನೀಡುವ ಪ್ರಯತ್ನ ಆಗಬೇಕು ಎಂದರು.
ಪುಸ್ತಕ ಕುರಿತು ಮಾತನಾಡಿದ ಪ್ರಾಧ್ಯಾಪಕಿ ಡಾ. ವಸುಮತಿ ಗೌಡ, ಕನ್ನಡ ಸಾಹಿತ್ಯ ಲೋಕಕ್ಕೆ ಸ್ಟ್ಯಾನಿ ಲೋಪಿಸ್ ಉತ್ತಮ ಕೃತಿಗಳ ಮೂಲಕ ಪ್ರವೇಶ ಮಾಡಿದ್ದಾರೆ. ಮಕ್ಕಳ ಜತೆ ಒಡನಾಡುವುದರಿಂದ ಮಕ್ಕಳ ಕುರಿತು ಅವರು ಹೊರತಂದಿರುವ ನೆನಪು ಕಥಾ ಸಂಕಲನ ಉತ್ತಮವಾಗಿ ಮೂಡಿ ಬಂದಿದೆ. ಬರುವಳು ಕಾದಂಬರಿ ಮಾನವೀಯ ನೆಲೆಗಟ್ಟಿನಲ್ಲಿ ಬದುಕು ಕಟ್ಟಿಕೊಡುವ ಸಂದೇಶ ನೀಡಿದೆ. ಇವರು ಒಬ್ಬ ಸಾಹಿತಿಯಾಗಿ ಇನ್ನಷ್ಟು ಯಶಸ್ಸು ಕಂಡುಕೊಳ್ಳಲಿ ಎಂದರು.
ತಾಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಪರಶುರಾಮ್, ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಜಗನ್ನಾಥ್, ಕೃತಿಕಾರ ಸ್ಟ್ಯಾನಿ ಲೋಪಿಸ್, ಸಿಸ್ಟರ್ ಕೊಳಂದೈ ತೆರೆಸಾ, ಜಿ.ನಾಗೇಶ್, ಲೋಕೇಶ್ ಕುಮಾರ್, ನಾರಾಯಣಮೂರ್ತಿ ಕಾನುಗೋಡು ಇತರರಿದ್ದರು.