

ಚಿಕ್ಕಮಗಳೂರು: ಈಗಿನ ಆಧುನಿಕ ತಂತ್ರಜ್ಞಾನದಲ್ಲಿ ಹೆಸರುವಾಸಿಯಾಗಿರುವ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಶಕೆ ಆರಂಭಗೊಂಡಿದ್ದು, ವಿದ್ಯುತ್ ಉತ್ಪಾದಿಸಲು ಅಗತ್ಯವಾದ ಸಿನ್ಕ್ರೋನೆಸ್ ಜೆನೆರೇಟರ್, ಅತ್ಯುತ್ತಮ ಪವರ್ ಫ್ಯಾಕ್ಟರ್ ಗಾಗಿ ಸಿನ್ಕ್ರೋನೆಸ್ ಕಂಡೆನ್ಸೆರ್ ಮತ್ತು ಇದರ ಜತೆಗೆ ಅತ್ಯುತ್ತಮ ವಿದ್ಯುತ್ ವಾಹಕ , ವಿದ್ಯುತ್ ಪರಿವರ್ತಕ ಮತ್ತು ವಿದ್ಯುತ್ ಪ್ರತಿಬಂಧಕಗಳ ಅವಶ್ಯಕತೆ ಇದೆ ಎಂದು ಬೆಂಗಳೂರಿನ ಟಿಡಿ ಪವರ್ ಸಿಸ್ಟಮ್ಸ್‌ನ ಟರ್ಬೋ ಮೆಶಿನ್ಸ್ ಮತ್ತು ಇಂಜಿನ್ ಅಪ್ಲಿಕೇಶನ್ಸ್ ವಿಭಾಗದ ಮುಖ್ಯಸ್ಥ ಎಚ್.ಜೆ.ಅಭಿಷೇಕ್ ತಿಳಿಸಿದರು.
ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ವಿಭಾಗದಿಂದ ಆಯೋಜಿಸಿದ್ದ ‘ಪ್ರಸ್ತುತ ಪರಿಸ್ಥಿತಿಯ ವಿದ್ಯುತ್ ಕ್ಷೇತ್ರಕ್ಕೆ ಆಧುನಿಕ ರೀತಿಯಲ್ಲಿ ಬೆಳಕು ಚೆಲ್ಲುವ ಈ- ಬೆಳಕು-2024’ ಎಂಬ ತಾಂತ್ರಿಕ ಪ್ರಬಂಧ ಮಂಡನ ರಾಷ್ಟ್ರಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಡಿಸೈನ್‌ಗಾಗಿ ಅಗತ್ಯವಾದ ಹೊಸ ಹೊಸ ತಂತ್ರಜ್ಞಾನ ಅಳವಡಿಸುವ ಕಾರ್ಯದಲ್ಲಿ ತಂತ್ರಜ್ಞರು ಮಗ್ನರಾಗಿದ್ದಾರೆ. ಪ್ರಸ್ತುತ ಆಧುನಿಕ ತಂತ್ರಜ್ಞಾನವು ನಾಗಾಲೋಟದಲ್ಲಿ ಮುಂದುವರೆಯುತ್ತಿದ್ದು, ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್, ಮೆಶಿನ್ ಲರ್ನಿಂಗ್, ಎಲೆಕ್ಟ್ರಿಕ್ ವೆಹಿಕಲ್ ತಂತ್ರಜ್ಞಾನ, ವೈರ್ಲೆಸ್ಸ್ ತಂತ್ರಜ್ಞಾನ, ವರ್ಚುಯಲ್ ರಿಯಾಲಿಟಿ ಮತ್ತು ಸೂಪರ್ ಕೆಪಾಸಿಟರ್‌ಗಳು ವಿದ್ಯಾರ್ಥಿಗಳ ಹೆಚ್ಚಿನ ಜ್ಞಾನಾರ್ಜನೆಗೆ ಸಹಕಾರಿಯಾಗಿವೆ ಎಂದರು.
ನಮ್ಮ ವಿದ್ಯುತ್ ವಿಭಾಗದ ವಿಧ್ಯಾರ್ಥಿಗಳು ಹೊಸ ಹೊಸ ಅನ್ವೇಷಣೆಯ ಕಡೆ ಹೆಜ್ಜೆಗಳನ್ನು ಇಡಬೇಕು. ಅತ್ಯುತ್ತಮ ತಾಂತ್ರಿಕ ನೈಪುಣ್ಯತೆಯನ್ನು ಪ್ರಬಂಧದಲ್ಲಿ ಅಳವಡಿಸಿಕೊಂಡು, ಸರಳವಾಗಿ ಪ್ರಸ್ತುತ ಪಡಿಸಿದರೆ ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ ಎಂದು ಹೇಳಿದರು. ವಿದ್ಯುತ್ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಆರ್.ವೀರೇಂದ್ರ, ಕಾರ್ಯಕ್ರಮದ ಮುಖ್ಯ ಸಂಘಟಕರಾದ ಡಾ. ಆರ್.ಡಿ. ಸತ್ಯನಾರಾಯಣ ರಾವ್, ಶ್ರೀಧರ್ ಮತ್ತಿತರರಿದ್ದರು.