ರಾಜಧಾನಿ ಬೆಂಗಳೂರು ಹೊರಗೆ ಹೊಸ ರೈಲ್ವೆ ಟರ್ಮಿನಲ್

vgk station
Published on

ಬೆಂಗಳೂರು: ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ಹಾಗೂ ಯಶವಂತಪುರ ಟರ್ಮಿನಲ್‌ನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆ ಹಾಗೂ ಭವಿಷ್ಯದಲ್ಲಿ ರಾಜಧಾನಿ ಹೊರಗೆ ಬಹುವಿಧ ಸೌಲಭ್ಯ ಒಳಗೊಂಡ ನೂತನ ಬೃಹತ್ ಟರ್ಮಿನಲ್ ಸ್ಥಾಪಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ.

ಪ್ರಸ್ತುತ ರಾಜ್ಯದ ಅತಿ ದೊಡ್ಡ ಟರ್ಮಿನಲ್ ಆಗಿರುವ ಕೆಎಸ್‌ಆರ್ ವಿಸ್ತರಣೆಗೆ ಜಾಗದ ಕೊರತೆ ಎದುರಾಗಿದೆ. ಜತೆಗೆ ಯಶವಂತಪುರ ಹಾಗೂ ಬೈಯಪ್ಪನಹಳ್ಳಿಯ ವಿಶ್ವೇಶ್ವರಯ್ಯ ಟರ್ಮಿನಲ್ ಕೂಡ ಹೆಚ್ಚಿನ ರೈಲು ಪ್ರಯಾಣಿಕರಿಗೆ ಸೌಲಭ್ಯ ಒದಗಿಸುತ್ತಿದೆ. ಭವಿಷ್ಯದಲ್ಲಿ ವಂದೇ ಭಾರತ್ ಸೇರಿ ವೇಗದ ರೈಲು ಓಡಾಟ ಹೆಚ್ಚಳವಾಗಲಿವೆ. ಇದರಿಂದ ನಗರಕ್ಕೆ ಮತ್ತೊಂದು ಟರ್ಮಿನಲ್ ಅಗತ್ಯವಿದ್ದು, ಸ್ಥಳಾಭಾವದಿಂದ ಹೊರವಲಯದತ್ತ ದೃಷ್ಟಿ ಹರಿಸುವುದು ಅನಿವಾರ್ಯವಾಗಿದೆ. ಜತೆಗೆ ರೈಲ್ವೆ ಹಾಗೂ ಏರ್‌ಪೋರ್ಟ್ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಕೆಐಎ) ಸಮೀಪ ಬೃಹತ್ ರೈಲ್ವೆ ಟರ್ಮಿನಲ್ ಸ್ಥಾಪನೆ ಸೂಕ್ತ ಎಂಬುದು ರೈಲ್ವೆ ಇಲಾಖೆ ಅಂದಾಜಿಸಿದೆ.

ಇದಕ್ಕಾಗಿ ದೇವನಹಳ್ಳಿ ಬಳಿಯ ರಾಷ್ಟ್ರಿಯ ಹೆದ್ದಾರಿ -44ಕ್ಕೆ ಹೊಂದಿಕೊಂಡಿರುವ ವೆಂಕಟಗಿರಿಕೋಟೆ ವ್ಯಾಪ್ತಿಯಲ್ಲಿ ನೂತನ ಕೋಚಿಂಗ್ ಟರ್ಮಿನಲ್‌ಗೆ ಜಾಗದ ಹುಡುಕಾಟ ಆರಂಭವಾಗಿದೆ. ಅವತಿ ಹಾಗೂ ವೆಂಕಟಗಿರಿಕೋಟೆ ರೈಲ್ವೆ ಸ್ಟೇಷನ್ ಮಧ್ಯೆ 5 ಗ್ರಾಮಗಳ (ಬುಳ್ಳಹಳ್ಳಿ, ವೆಂಕಟಗಿರಿಕೋಟೆ, ತಟ್ಟಮಾಚನಹಳ್ಳಿ, ಇರಿಗೇನಹಳ್ಳಿ, ಜಿ.ಹೊಸೂರು) ವ್ಯಾಪ್ತಿಯಲ್ಲಿ ಹೊಸ ಟರ್ಮಿನಲ್ ತಲೆಯೆತ್ತಬಹುದಾಗಿದೆ. ಸುಮಾರು 750 ಎಕರೆ ಜಮೀನು ಹೊಂದುವ ಸಂಬಂಧ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಚಾಲನೆ ದೊರೆತಿದೆ. ಈ ವರದಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಕೆಎಸ್‌ಆರ್‌ಗಿಂತ ದುಪ್ಪಟ್ಟು ಸೌಲಭ್ಯ:

ಸದ್ಯ ಕೆಎಸ್‌ಆರ್‌ನಲ್ಲಿ 10 ಪ್ಲಾಟ್‌ಫಾರ್ಮ್ ಇವೆ. ಜತೆಗೆ ಸರ್ವಿಸ್ ಕಾರ್ಯ ಮುಗಿದ ಬಳಿಕ ನಿಲುಗಡೆ ಸೌಲಭ್ಯಕ್ಕಾಗಿ 6 ಸ್ಟಾಬ್ಲಿಂಗ್ ಲೈನ್ ಹಾಗೂ ರೈಲುಗಳ ನಿರ್ವಹಣೆ/ಸ್ವಚ್ಛತೆಗೆ 5 ಪಿಟ್ ಲೈನ್‌ಗಳಿವೆ. ಉದ್ದೇಶಿತ ಬೃಹತ್ ಟರ್ಮಿನಲ್‌ನಲ್ಲಿ 15-16 ಪ್ಲಾಟ್‌ಾರ್ಮ್, 20 ಸ್ಟಾಬ್ಲಿಂಗ್ ಲೈನ್ ಹಾಗೂ 10 ಪಿಟ್ ಲೈನ್‌ಗಳಿರುತ್ತವೆ. ಜತೆಗೆ ವರ್ತುಲಾಕಾರದಲ್ಲಿ ರೈಲುಗಳ ಓಡಾಟ, ಸರಕು ಸಾಗಣೆ, ಪಾರ್ಕಿಂಗ್ ಹಾಗೂ ಇನ್ನಿತರ ಸೌಲಭ್ಯಕ್ಕಾಗಿ ಹೆಚ್ಚಿನ ಜಾಗದ ಅಗತ್ಯ ಇದೆ. ಹಾಗಾಗಿ ಕೆಎಸ್‌ಆರ್‌ಗಿಂತಲೂ ವಿಸ್ತಾರವಾದ ಜಾಗದಲ್ಲಿ ಹೊಸ ಕೋಚಿಂಗ್ ಟರ್ಮಿನಲ್ ಸ್ಥಾಪಿಸುವ ಇಂಗಿತ ವ್ಯಕ್ತವಾಗಿದೆ.

ದೇವನಹಳ್ಳಿ ಬಳಿಯೇ ಏಕೆ?:

ಉದ್ದೇಶಿತ ಕೋಚಿಂಗ್ ಟರ್ಮಿನಲ್‌ಗೆ ಸುಮಾರು 750 ಎಕರೆ ವಿಸ್ತೀರ್ಣದ ಸಮತಟ್ಟಾದ ಪ್ರದೇಶವು ಬೇಕಿದೆ. ಇದು ವೆಂಕಟಗಿರಿಕೋಟೆ ಬಳಿ ಲಭ್ಯವಾಗಲಿದೆ. ಮುಖ್ಯವಾಗಿ ಕೆಐಎ ಏರ್‌ಪೋರ್ಟ್ ಹಾಗೂ ಹೊಸ ರೈಲ್ವೆ ಟರ್ಮಿನಲ್ ಮೂಲಕ ಸಾರ್ವಜನಿಕರಿಗೆ ಹೈಟೆಕ್ ಪ್ರಯಾಣ ಸೌಲಭ್ಯ ಹೊಂದಲು ಅವಕಾಶವಾಗಲಿದೆ. ಈಗಾಗಲೇ ಕೆಐಎ, ಎಸ್‌ಟಿಆರ್‌ಆರ್, ಎನ್‌ಎಚ್-44 ರಸ್ತೆ ಸೌಲಭ್ಯ ಇರುವುದರಿಂದ ಮೂಲಸೌಕರ್ಯ ಒದಗಿಸಲು ಸಹಕಾರಿಯಾಗಲಿದೆ. ಜತೆಗೆ ಚಿಕ್ಕಬಳ್ಳಾಪುರ ಮೂಲಕ ಗುಂತಕಲ್ ಮಾರ್ಗವಾಗಿ ನೆರೆಯ ರಾಜ್ಯ ಹಾಗೂ ಉತ್ತರ ಭಾರತದತ್ತ ವೇಗದ ರೈಲುಗಳು ಸಂಚರಿಸಲು ಹೊಸ ಮಾರ್ಗವೂ ಲಭ್ಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net