

ವಿಜಯವಾಣಿ ಸುದ್ದಿ ಜಾಲ ಹೆಬ್ರಿ
ಹೆಬ್ರಿ ಕೆಳಪೇಟೆಯ ರಸ್ತೆಯಲ್ಲಿನ ಹೊಂಡ ಗುಂಡಿಗಳಿಂದ ಬೇಸತ್ತು ಹೋದ ಜನ ವಿಭಿನ್ನವಾಗಿ ಪ್ರತಿಭಟಿಸಿದ್ದಾರೆ. ಹೊಂಡ ಇರುವ ಜಾಗದಲ್ಲಿ ಗಿಡ ಹಾಗೂ ಸ್ಟೀಲಿನ ಗೇಟ್ ಅಡ್ಡವಾಗಿ ಇರಿಸಲಾಗಿದೆ.
ಕೆಲ ದಿನಗಳ ಹಿಂದೆ ಇದೇ ಸ್ಥಳದಲ್ಲಿ ಬಾಳೆ ಗಿಡ ನೆಟ್ಟು ಸಂಬಂಧಪಟ್ಟವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಗಮನಿಸಿದ ಗುತ್ತಿಗೆದಾರರೊಬ್ಬರು ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚಿದ್ದರು. ಭಾರಿ ಮಳೆಯಿಂದಾಗಿ ಮತ್ತೆ ಗುಂಡಿ ನಿರ್ವಾಣವಾಗಿ ಅವಘಡಗಳು ಸಂಭವಿಸುತ್ತಿರುವುದರಿಂದ ಸ್ಥಳೀಯರು ವಿನೂತನವಾಗಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ.
ಈ ರಸ್ತೆಯ ಹೊಂಡ ಗುಂಡಿಗಳ ಬಗ್ಗೆ ವಿಜಯವಾಣಿ ಪತ್ರಿಕೆ ವರದಿ ಪ್ರಕಟಿಸಿತ್ತು.
ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹೊಂಡಗಳಿದ್ದು ವಾಹನ ಸವಾರರಿಗೆ ಹತ್ತಿರ ಬರುವ ತನಕವೂ ಹೊಂಡಗಳ ಗೋಚರವಾಗದೆ ವಾಹನಗಳು ಹೊಂಡಕ್ಕೆ ಬೀಳುತ್ತಿವೆ. ಕಳೆದ ವಾರ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಕಲ್ಲಿನ ಪುಡಿ ಹಾಕಿ ತಾತ್ಕಾಲಿಕ ಹೊಂಡ ಮುಚ್ಚುವ ಕಾರ್ಯ ವಾಡಿದ್ದರು. ನಿರತಂರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಲ್ಲಿನ ಪುಡಿ ಕೊಚ್ಚಿ ಹೋಗಿದ್ದು ಮತ್ತೇ ಬೃಹತ್ ಹೊಂಡಗಳಾಗಿವೆ. ವಾಹನ ಸಂಚಾರವೇ ದುಸ್ತರವಾಗಿದೆ.