ನಾಡ ಕಚೇರಿ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ

Nada office building
Nada office building at kundana
Published on

ಕುಂದಾಣ ಕೊಪ್ಪಲಿನಲ್ಲಿ ಧೂಳು ಹಿಡಿಯುತ್ತಿರುವ ನೂತನ ಕಾರ್ಯಾಲಯ

ಕುಂದಾಣ: ದೇವನಹಳ್ಳಿ ತಾಲೂಕಿನ ಕುಂದಾಣ ಕೊಪ್ಪಲಿನಲ್ಲಿ ನಾಡ ಕಚೇರಿ ಕಟ್ಟಡಕ್ಕೆ ಉದ್ಘಾಟನಾ ಭಾಗ್ಯ ಕೂಡಿಬಂದಿಲ್ಲ.
18.84 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡು ವರ್ಷಗಳೇ ಉರುಳಿದರೂ ಅಧಿಕಾರಿಗಳು ಹಾಗೂ ಜನಪ್ರತಿ ನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ನೂತನ ಕಟ್ಟಡ ಉದ್ಘಾಟನೆಗೂ ಮುನ್ನ ಮಳೆ, ಗಾಳಿಗೆ ಕಿಟಕಿ-ಬಾಗಿಲುಗಳು ತುಕ್ಕು ಹಿಡಿಯುವ ಸ್ಥಿತಿ ನಿರ್ಮಾಣವಾಗಿದೆ.
ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಕಿರಿದಾಗಿದ್ದ ಕಟ್ಟಡ ತೆರವು ಮಾಡಿ 2022ರ ಜನವರಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ, ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನೆ ಭಾಗ್ಯ ಇಲ್ಲವಾಗಿದೆ.

ಖಾಸಗಿ ಕಟ್ಟಡದಲ್ಲಿ ಸೇವೆ: ಕಲ್ಲಿನ ಹಳೇ ಕಟ್ಟಡದಲ್ಲಿದ್ದ ಕಚೇರಿಗಳನ್ನು ತೆರವು ಮಾಡಿದ ಬಳಿಕ ಪಶು ಆಸ್ಪತ್ರೆ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಎರಡು ಕೋಣೆಗಳಲ್ಲಿ ಉಪತಹಸೀಲ್ದಾರ್ ಕಚೇರಿ ಹಾಗೂ ಖಾಸಗಿ ಕಟ್ಟಡದಲ್ಲಿ ಕಂದಾಯ ಅಧಿಕಾರಿ ಹಾಗೂ ಗ್ರಾಮಲೆಕ್ಕಿಗರು ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರು ಸಮರ್ಪಕ ಸೇವೆ ಪಡೆಯಲು ಪರದಾಡುವಂತಾಗಿದೆ.

ಮೂಲಸೌಕರ್ಯ ಮರೀಚಿಕೆ: ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವ ನಿರ್ಮೀತಿ ಕೇಂದ್ರ ಸಂಬಂಧಿಸಿದವರಿಗೆ ಕಟ್ಟಡ ಹಸ್ತಾಂತರಿಸಿದೆ. ಆದರೆ ಕಚೇರಿಗೆ ಅವಶ್ಯವಿರುವ ವಿದ್ಯುತ್, ಶೌಚಗೃಹ, ಕಾಂಪೌಂಡ್ ಸೇರಿ ಇನ್ನಿತರ ಸೌಲಭ್ಯ ಕಲ್ಪಿಸದ ಪರಿಣಾಮ ಹೊಸ ಕಟ್ಟಡವಿದ್ದರೂ ಸಾರ್ವಜನಿಕರ ಬಳಕೆಗೆ ಬಾರದಂತಾಗಿದೆ.


ನಿರ್ಮಿತಿ ಕೇಂದ್ರದಿಂದ ಕುಂದಾಣ ಕೊಪ್ಪಲಿನಲ್ಲಿ 18.84 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಾಡ ಕಚೇರಿ ಕಟ್ಟಡ ನಿರ್ಮಿಸಿ ತಹಸೀಲ್ದಾರ್ ಹಾಗೂ ಕುಂದಾಣ ಉಪ ತಹಸೀಲ್ದಾರ್ ಅವರಿಗೆ ಕಟ್ಟಡ ಹಸ್ತಾಂತರಿಸಿದ್ದೇವೆ.
ಮೋಹನ್‌ಕುಮಾರ್, ಜಿಲ್ಲಾ ಯೋಜನಾ ನಿರ್ದೇಶಕರು ನಿರ್ಮಿತಿ ಕೇಂದ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net