ಹಾಲಿವುಡ್ ಶೈಲಿಯ ’ತುಂಬೆ’ ಗುರುತಿನ ಚಿಹ್ನೆ ಅನಾವರಣ ತುಂಬೆ ಹಿಲ್ಸ್‌ನಲ್ಲಿ ಸಾರ್ವಜನಿಕರ ಕಣ್ಮನ ಸೆಳೆಯುತ್ತಿದೆ 30 ಅಡಿ ಎತ್ತರ, 150 ಅಡಿ ಅಗಲ

thumbe
Published on

ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ತುಂಬೆ ಬೆಟ್ಟದ ಮೇಲ್ಭಾಗದಲ್ಲಿ 30 ಅಡಿ ಎತ್ತರ, 150 ಅಡಿ ಅಗಲದ ಆಕರ್ಷಕವಾದ ಬಿಳಿ ಬಣ್ಣದ ಅಕ್ಷರಗಳಲ್ಲಿ ನಿಲ್ಲಿಸಿರುವ ‘ತುಂಬೆ’ ಎಂಬ ಹಾಲಿವುಡ್ ಶೈಲಿಯ ಹೊಸ ಗುರುತಿನ ಚಿಹ್ನೆ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಹಾಲಿವುಡ್‌ನ ಪ್ರಸಿದ್ಧ ಗುರುತಿನ ಚಿಹ್ನೆಯಿಂದ ಪ್ರೇರಿತವಾಗಿ ನಿರ್ಮಿಸಲಾದ ಈ ತುಂಬೆ ಸೂಚಕ ಚಿಹ್ನೆಯು ತುಂಬೆ ಗ್ರೂಪ್ ಸ್ಥಾಪಕ ಮತ್ತು ಉದ್ಯಮಿ ಡಾ.ತುಂಬೆ ಮೊಯಿದೀನ್ ಅವರ ಪರಿಕಲ್ಪನೆಯಾಗಿದೆ. ಈ ಚಿಹ್ನೆಯನ್ನು ತುಂಬೆ ಹಿಲ್ಸ್‌ನಿಂದ ತಂತ್ರಬದ್ಧವಾಗಿ ಸ್ಥಾಪಿಸಲಾಗಿದೆ, ಇದು ಆ ಪ್ರದೇಶಕ್ಕೆ ವಿಶಿಷ್ಟ ಗುರುತು ನೀಡಲಿದೆ.

ಈ ಚಿಹ್ನೆ ಕೇವಲ ಗುರುತು ಮಾತ್ರವಲ್ಲ. ಇದು ತುಂಬೆ ಪ್ರದೇಶದ ಜನರ ಭಾವನೆ, ಪ್ರಗತಿ ಮತ್ತು ಹೆಮ್ಮೆಯ ಪ್ರತೀಕ. ನಮ್ಮ ಆಳವಾದ ಪರಂಪರೆಯನ್ನು ಪ್ರತಿಬಿಂಬಿಸುವಂತೆಯೇ, ಮುಂದಿನ ಪೀಳಿಗೆಗೆ ದೊಡ್ಡ ಕನಸುಗಳನ್ನು ಕಾಣಲು ಪ್ರೇರಣೆಯಾಗುವಂತಹ ಐಕಾನಿಕ್ ಸಂಕೇತವನ್ನು ನಾನು ನಿರ್ಮಿಸಲು ಬಯಸಿದೆ ಎಂದು ಡಾ.ತುಂಬೆ ಮೊಯೀದೀನ್ ತಿಳಿಸಿದ್ದಾರೆ.

ಚಿಹ್ನೆ ನಿರ್ಮಾಣಕ್ಕೆ ಒಂದು ತಿಂಗಳಿಗಿಂತ ಹೆಚ್ಚು ಸಮಯವಾಗಿದೆ. ಕಾರ್ಮಿಕ ಮತ್ತು ತಾಂತ್ರಿಕ ತಂಡದ ಸಹಕಾರದಿಂದ ಆಕರ್ಷಕವಾಗಿ ರೂಪಿಸಲಾಗಿದೆ. ದಪ್ಪ ವಿನ್ಯಾಸ ಮತ್ತು ಎತ್ತರದಲ್ಲಿರುವುದರಿಂದ ದೂರದಿಂದಲೇ ಸಾರ್ವಜನಿಕರನ್ನು ಆಕರ್ಷಿಸುತ್ತದೆ. ಸ್ಥಳೀಯ ಪ್ರವಾಸೋದ್ಯಮ ಮತ್ತು ಬ್ರಾಂಡಿಂಗ್‌ಗೆ ಆಕರ್ಷಣೆಯ ಕೇಂದ್ರಬಿಂದು ಆಗಬಹುದು. ಈಗ ತುಂಬೆ ಗುರುತಿನ ಚಿಹ್ನೆ ಜನಪ್ರಿಯ ಫೋಟೋ ಸ್ಪಾಟ್ ಆಗಿ ಹೊರಹೊಮ್ಮುತ್ತಿದೆ. ಪ್ರಯಾಣಿಕರು ಅದರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ನಿಲ್ಲುತ್ತಿದ್ದಾರೆ ಮತ್ತು ಅದರ ವೈಭವವನ್ನು ಮೆಚ್ಚುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತುಂಬೆ ಗ್ರೂಪ್ ಎನ್ನುವುದು ಯುಎಇಯಲ್ಲಿ ಪ್ರಧಾನ ಕಚೇರಿಯುಳ್ಳ ಅಂತಾರಾಷ್ಟ್ರೀಯ ವ್ಯವಹಾರಿಕ ಸಂಸ್ಧೆಯಾಗಿದ್ದು, ಡಾ.ತುಂಬೆ ಮೊಯಿದೀನ್ ಅವರಿಂದ ಸ್ಥಾಪಿಸಲ್ಪಟ್ಟಿದೆ. ಈ ಗ್ರೂಪ್ ಆರೋಗ್ಯ ಸೇವೆ, ವೈದ್ಯಕೀಯ ಶಿಕ್ಷಣ, ವೆಲ್‌ನೆಸ್ ಮತ್ತು ಆತಿಥ್ಯ ಸೇವೆಗಳ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಯುಎಇಯಲ್ಲಿ ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಿದ ಮೊದಲ ಸಂಸ್ಥೆಯಾಗಿರುವ ತುಂಬೆ ಗ್ರೂಪ್ ನಾವೀನ್ಯತೆ, ಸೇವೆ ಮತ್ತು ಸಾಮಾಜಿಕ ಪ್ರಭಾವದ ಮೂಲಕ ಸಮುದಾಯಗಳನ್ನು ರೂಪಿಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net