

ಧಾರವಾಡ: ನಮ್ಮ ದೇಶದ ಸದ್ಯದ ಶಿಕ್ಷಣ ವ್ಯವಸ್ಥೆ ಬಗ್ಗೆ ಸಾಕಷ್ಟು ಅಪಸ್ವರಗಳು ಕೇಳಿ ಬಂದಿವೆ. ಇದಲ್ಲದೆ ಪದವಿಗಳನ್ನು ಮಾರುವ ವ್ಯವಸ್ಥೆ ಬಂದಾಗಿ, ಪದವಿ ಪಡೆಯುವ ವ್ಯವಸ್ಥೆ ಬರಬೇಕಿದೆ. ಇದಕ್ಕೆ ಪರಿಹಾರ ಹುಡುಕಿ ಸರ್ವಾಂಗೀಣ ಅಭಿವೃದ್ಧಿಗೆ ಹೊಸ ಶಿಕ್ಷಣ ನೀತಿ ತರಲಾಗಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶಕುಮಾರ ಹೇಳಿದರು.
ಕರ್ನಾಟಕ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ವತಿಯಿಂದ ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಶತಮಾನದ ಸಮಸ್ಯೆಗಳಿಗೆ ಪರಿಹಾರ ಹುಡುಕಿ, ಯುವ ಜನರನ್ನು ತಯಾರಿಸಲು ಹೊಸ ನೀತಿ ರೂಪಿಸಲಾಗಿದೆ. ಈ ನೀತಿ ದಿಢೀರ್ ಸಿದ್ಧವಾಗಿಲ್ಲ. ಇಡೀ ದೇಶ ಸುತ್ತಾಡಿ ತಜ್ಞರ, ಪರಿಣಿತರ ಸಲಹೆ, ಸೂಚನೆ ಪಡೆದು ಸಿದ್ಧಪಡಿಸಲಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಈ ನೀತಿ ಸಹಕಾರಿ. ಇದರ ಪ್ರಯೋಜನ ಪಡೆದವರು ಸಮಸ್ಯೆ ಪರಿಹರಿಸುವ ವ್ಯಕ್ತಿಯಾಗಬೇಕೆ ಹೊರತು, ಸಮಸ್ಯೆ ಆಗದಿರಲಿ ಎಂಬುದು ನಮ್ಮ ಆಶಯ ಎಂದರು.
ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪುರ, ಹನುಮಂತ ನಿರಾಣಿ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್ ಆರ್., ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇ. ಸಿದ್ದಲಿಂಗಯ್ಯ ಹಿರೇಮಠ, ಸಂದೀಪ ಬೂದಿಹಾಳ, ಸಂಘದ ಪದಾಧಿಕಾರಿಗಳು, ಇತರರು ಇದ್ದರು.
ಡಾ. ಲಿಂಗಯ್ಯ ಹಿರೇಮಠ ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತಾ ಕುಸುಗಲ್ ನಿರೂಪಿಸಿದರು.
ಬೇಡಿಕೆ ಈಡೇರಿಸುವ ಭರವಸೆ
ಪಪೂ ಕಾಲೇಜುಗಳಿಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಒಂದೆರಡು ದಿನಗಳಲ್ಲಿ ಆದೇಶ ಹೊರಡಿಸಲಾಗುವುದು. ಅನುದಾನಿತ ಶಾಲೆ-ಕಾಲೇಜುಗಳಲ್ಲಿ ಅನುದಾನಿತ ಶಿಕ್ಷಕರ ನಿವೃತ್ತಿ ಅಥವಾ ನಿಧನ ಬಳಿಕ ತೆರವಾದ ಸ್ಥಾನಗಳ ಭರ್ತಿಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಇನ್ನುಳಿದ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಲಾಗುವುದು ಎಂದು ಸಚಿವ ಸುರೇಶಕುಮಾರ ಭರವಸೆ ನೀಡಿದರು.
ತುಪ್ಪದ ಅವಲಕ್ಕಿ ಸವಿದ ಸಚಿವ
ಸರಳತೆಯಿಂದ ಹೆಸರಾಗಿರುವ ಶಿಕ್ಷಣ ಸಚಿವ ಎಸ್. ಸುರೇಶಕುಮಾರ, ನಗರದ ಎಲ್ಇಎ ಕ್ಯಾಂಟೀನ್ನ ತುಪ್ಪದ ಅವಲಕ್ಕಿ ಪ್ರಸಿದ್ಧಿ ಹೊಂದಿರುವ ಮಾಹಿತಿ ತಿಳಿದು ಸೋಮವಾರ ಸಂಜೆ ಭೇಟಿ ನೀಡಿ ಚಹಾ, ಚುರುಮುರಿ ಸವಿದರು. ಸಂಜೆ 7 ಗಂಟೆ ಹೊತ್ತಿಗೆ ಕ್ಯಾಂಟೀನ್ಗೆ ತೆರಳಿದ ಸಚಿವರು, ತುಪ್ಪದ ಅವಲಕ್ಕಿ, ಚುರುಮುರಿ, ವಡೆ, ಟೋಸ್ಟ್ ಹಾಗೂ ಬ್ಲ್ಯಾಕ್ ಟೀ ಸೇವಿಸಿದರು. ಕ್ಯಾಂಟೀನ್ನಿಂದ ಹೊರ ಬರುವಾಗ ಸಿಕ್ಕ ಬಾಲಕನೊಂದಿಗೆ ಓದಿನ ಕುರಿತು ಕೆಲ ನಿಮಿಷಗಳ ಕಾಲ ಮಾತುಕತೆ ನಡೆಸಿದರು.