

ಶಿರಸಿ: ಮದ್ಯಪಾನ ತ್ಯಜಿಸಿ ನವಜೀವನಕ್ಕೆ ಕಾಲಿಡುತ್ತಿರುವವರು ಸಮಾಜದಲ್ಲಿ ಎಲ್ಲ ಗೌರವಗಳನ್ನು ಪಡೆದುಕೊಳ್ಳುತ್ತಾರೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ತಾಲೂಕಿನ ಬನವಾಸಿಯ ನಾಮದೇವ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ತಾಲೂಕು ಘಟಕ ಆಯೋಜಿಸಿರುವ 1889ನೇ ಮದ್ಯವರ್ಜನ ಶಿಬಿರದಲ್ಲಿ ಅವರು ಮಾತನಾಡಿದರು. ಮದ್ಯಪಾನದಿಂದಾಗಿ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಶಿಬಿರದಲ್ಲಿ ಪಾಲ್ಗೊಂಡವರು ಸ್ವಪ್ರೇರಣೆಯಿಂದ ವ್ಯಸನಮುಕ್ತರಾಗಿ ಜೀವನ ನಡೆಸಿದಲ್ಲಿ ಶಿಬಿರ ಆಯೋಜಕರಿಗೂ ನೀಡುವ ದೊಡ್ಡ ಗೌರವವಾಗಿರುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಾರ್ಥವಿಲ್ಲದ ಕಾರ್ಯ ಶ್ಲಾಘನೀಯವಾಗಿದೆ. ಸ್ವಸ್ಥ ಸಮಾಜ ನಿರ್ಮಾಣದ ಜತೆಗೆ ವ್ಯಸನಿಗಳ ಬದುಕಿನಲ್ಲಿ ಹೊಸ ಆವಿಷ್ಕಾರ ಮೂಡಿಸುವ ಉದ್ದೇಶವನ್ನು ಯೋಜನೆ ಹೊಂದಿದೆ. ಇಂತಹ ಸಮಾಜಮುಖಿ ಕಾರ್ಯಗಳಿಂದ ಹಲವು ಸಂಸಾರಗಳು ಉತ್ತಮ ಬದುಕು ರೂಪಿಸಿಕೊಂಡು ಜೀವನ ಸಾಗಿಸುತ್ತಿವೆ. ಶೇ. 96ರಷ್ಟು ಶಿಬಿರಾರ್ಥಿಗಳು ವ್ಯಸನ ಮುಕ್ತರಾದಲ್ಲಿ ಶಿಬಿರವು ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಗಜಾನನ ಗೌಡ ಮಾತನಾಡಿ, ವ್ಯಸನಮುಕ್ತ ಸಮಾಜದ ನಿರ್ಮಾಣವೇ ಶಿಬಿರದ ಮುಖ್ಯ ಉದ್ದೇಶವಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಶಿಬಿರಗಳು ನಡೆಯುತ್ತಿವೆ. ಸಮಾಜ ಸುಧಾರಣಾ ಕಾರ್ಯದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಮಹತ್ವಪೂರ್ಣವಾಗಿದೆ ಎಂದರು.
ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್ ನಾಯ್ಕ, ಉದ್ಯಮಿ ಅರವಿಂದ ಶೆಟ್ಟಿ, ಸಾಮಾಜಿಕ ಕಾರ್ಯಕರ್ತೆ ಶಾಂತಲಾ ಕಾನಳ್ಳಿ ಮಾತನಾಡಿದರು. ಬನವಾಸಿ ವಲಯ ಅರಣ್ಯಾಧಿಕಾರಿ ಭವ್ಯ ನಾಯ್ಕ, ಮದ್ಯವರ್ಜನ ಸಮಿತಿಯ ಗೌರವಾಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ, ಗ್ರಾಪಂ ಅಧ್ಯಕ್ಷೆ ಬೀಬಿ ಆಯಿಷಾ ಖಾನ್, ಯೋಜನಾಧಿಕಾರಿ ರಾಘವೇಂದ್ರ ನಾಯ್ಕ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ನಾಗೇಂದ್ರ, ಆರೋಗ್ಯ ಸಹಾಯಕಿ ಜಯಲಕ್ಷ್ಮಿ, ಗ್ರಾಪಂ ಉಪಾಧ್ಯಕ್ಷ ಸಿದ್ದು ನೆರಗಲ್, ಸದಸ್ಯರಾದ ನಾಗರಾಜ ಉಪ್ಪಾರ, ಹಸೀನಾ ಬೇಗಂ, ರಘು ನಾಯ್ಕ, ಅಶೋಕ ನಾಯ್ಕ, ನಾಗರಾಜ ನಾಯ್ಕ, ಸಾಯಿರಾಂ ಕಾನಳ್ಳಿ, ಜಗದಂಬ ಪಟಗಾರ, ಇತರರು ಇದ್ದರು. ವ್ಯವಸ್ಥಾಪನ ಸಮಿತಿಯ ಕೋಶಾಧಿಕಾರಿ ಸುಧೀರ ನಾಯರ್ ನಿರೂಪಿಸಿದರು. ಸೇವಾ ಪ್ರತಿನಿಧಿ ಅನಿತಾ ಬಂಗ್ಲೆ ಪ್ರಾರ್ಥಿಸಿದರು. ಮೇಲ್ವಿಚಾರಕ ನಾಗರಾಜ ಪಿ. ಸ್ವಾಗತಿಸಿದರು. ಯೋಜನಾಧಿಕಾರಿ ರಾಘವೇಂದ್ರ ನಾಯ್ಕ ವಂದಿಸಿದರು.