

ಭದ್ರಾವತಿ: ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘ(ಮ್ಯಾಮ್ಕೋಸ್) ಇಲ್ಲಿಯವರೆಗೆ ಲಾಭದಾಯಕವಾಗಿ ನಡೆದುಕೊಂಡು ಬರುತ್ತಿರುವ ಸ್ವಾವಲಂಬಿ ಸಹಕಾರಿ ಸಂಸ್ಥೆ ಎಂದು ಮ್ಯಾಮ್ಕೋಸ್ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಹುಲ್ಕುಳಿ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿರುವ ಮ್ಯಾಸ್ಕೋಸ್ ಕಚೇರಿ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಷೇರುದಾರರ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿ, 12 ಶಾಖೆ, 18 ಸಂಗ್ರಹಣಾ ಕೇಂದ್ರಗಳನ್ನು ಹೊಂದಿದೆ. 29 ಸಾವಿರ ಷೇರುದಾರರನ್ನು ಹೊಂದಿರುವ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ. 2017-18ನೇ ಸಾಲಿನಲ್ಲಿ ನೇರ ಖರೀದಿ ಕೇಂದ್ರಗಳನ್ನು ತೆರೆದಿದ್ದು ಮುಂದೆ ಅವಶ್ಯಕತೆಗನುಗುಣವಾಗಿ ಮತ್ತಷ್ಟು ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಎಂದರು.
ಭದ್ರಾವತಿ ಶಾಖಾ ಕಚೇರಿಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ 2,151 ಸದಸ್ಯನ್ನು ಹೊಂದಿದೆ. 511.96 ಲಕ್ಷ ರೂ. ಅಡಕೆ ವ್ಯವಹಾರ ನಡೆಸಿದೆ. 212.88 ಲಕ್ಷ ರೂ. ಕಟಾವು ಸಾಲ ನೀಡಿದೆ. ಒಟ್ಟಾರೆ ಮ್ಯಾಮ್ಕೋಸ್ 4.41 ಕೋಟಿ ರೂ. ಲಾಭ ಗಳಿಸಿದೆ. ರೈತರ ಆರೋಗ್ಯದ ಹಿತದೃಷ್ಟಿಯಿಂದ ಜಾರಿಗೆ ತಂದ ವಿಮಾ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ. ಕೃಷಿಕರ ಕುಟುಂಬ ಸದಸ್ಯರು ಸೇರಿದಂತೆ ತೋಟದಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರು ಸಹ ಹಾವು ಕಡಿತ ಸೇರಿದಂತೆ ಯಾವುದೇ ಅನಾಹುತಗಳಿಗೆ ಒಳಗಾದಲ್ಲಿ 6 ಲಕ್ಷ ರೂ.ವರೆಗೂ ಪರಿಹಾರದ ಮೊತ್ತ ಸಿಗಲಿದೆ. ಕಟ್ಟುವ ವಿಮಾ ಮೊತ್ತ ಕೂಡ ಬಹಳ ಕಡಿಮೆ ಇದೆ. ಗುಂಪು ವಿಮೆ ಮಾಡಿಸಲು ಷೇರುದಾರರು ಮುಂದಾಗಬೇಕು ಎಂದರು.
ಸದಸ್ಯರ ಅನುಕೂಲಕ್ಕಾಗಿ ಮ್ಯಾಮ್ಕೋಸ್‌ನಿಂದ ಹೊಸ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗಿದೆ. ಈ ಮೂಲಕ ನಿಮ್ಮ ವ್ಯಾಪಾರ ವಹಿವಾಟನ್ನು ಕುಳಿತಲ್ಲಿಯೇ ತಿಳಿದುಕೊಳ್ಳಬಹುದು. ನಿಮ್ಮ ಕಷ್ಟ, ಸುಖಗಳನ್ನು ಹೇಳಿಕೊಳ್ಳಬಹುದು ಎಂದು ಮಹೇಶ್ ಹುಲ್ಕುಳಿ ತಿಳಿಸಿದರು. ಸಂಸ್ಥೆಯಿಂದ ಕಲಬೆರಕೆ ಇಲ್ಲದ ಉತ್ಕೃಷ್ಟ ಗುಣಮಟ್ಟದ ಸಾವಯವ ಗೊಬ್ಬರ ಸಹ ನೀಡಲಾಗುತ್ತಿದೆ. ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳು ಮಾತ್ರ ಕೃಷಿ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿದರೆ ಸಾಲದು ಕೃಷಿಕ ಸಹ ಸಮಸ್ಯೆಗಳ ಅಧ್ಯಯನ ಮಾಡಬೇಕು. ಸಂಸ್ಥೆಯೂ ಅದೇ ನಿಟ್ಟಿನಲ್ಲಿ ಸಾಗುತ್ತಾ ಹಲವಾರು ಕಾರ್ಯಾಗಾರಗಳನ್ನು ನಡೆಸುತ್ತಿದೆ. ನುರಿತ ತಜ್ಞರಿಂದ ಎಲೆಚುಕ್ಕೆ ರೋಗ ಸೇರಿದಂತೆ ವಿವಿಧ ಕಾಯಿಲೆಗಳ ಬಗ್ಗೆ ಮಾಹಿತಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಪ್ರಮುಖರಾದ ವೈ.ಕೆ.ಸುಬ್ರಹ್ಮಣ್ಯ, ಶ್ರೀಕಾಂತ್ ಬರುವೆ. ಟಿ.ಆರ್.ಭೀಮ್‌ರಾವ್. ಸಿ.ಬಿ.ಈಶ್ವರ್, ವಡ್ಡಿನಬೈಲು ಸುಬ್ಬಣ್ಣ, ಕೆ.ವಿ.ಕೃಷ್ಣಮೂರ್ತಿ, ತಿಮ್ಮಪ್ಪ, ಕೆ.ಕೆ.ಜಯಶ್ರೀ, ಕೀರ್ತಿರಾಜ್, ದಿನೇಶ್, ವಿಜಯಲಕ್ಷ್ಮೀ, ಗೊಂದಿ ಜಯರಾಂ, ರಮೇಶ್, ಜಿ.ಈ.ವಿರೂಪಾಕ್ಷಪ್ಪ ಇತರರಿದ್ದರು.