NET ಎಕ್ಸಾಂನಲ್ಲಿ ಪ್ರಶ್ನೆ ಪತ್ರಿಕೆಯೇ ಅದಲು-ಬದಲು: ಕನ್ನಡ ಬರೆಯಲು ಬಂದವರಿಗೆ ಹಿಂದಿ ಶಾಕ್​

New Project
Published on

ಬೆಂಗಳೂರು: ಇಂದು ನಡೆದ ಎನ್​ಇಟಿ (NET) ಪರೀಕ್ಷೆಯಲ್ಲಿ ಮಹಾ ಪ್ರಮಾದವೇ ನಡೆದಿದೆ. ಭಾನುವಾರ ಬೆಳಗ್ಗೆ 9 ಗಂಟೆಗೆ ಆನ್​ಲೈನ್ ಮೂಲಕ ಆರಂಭವಾದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಅದಲು ಬದಲು ಆಗಿದ್ದು ಮಾತ್ರವಲ್ಲ, ಸಾವಿರಾರು ಅಭ್ಯರ್ಥಿಗಳಿಗೆ ಮಧ್ಯಾಹ್ನ 12 ಗಂಟೆಯಾದರೂ ಪ್ರಶ್ನೆ ಪತ್ರಿಕೆ ಕೊಡದೆ ಪರೀಕ್ಷೆ ಬರೆಯಲು ಅವಕಾಶವನ್ನೂ ಕೊಟ್ಟಿಲ್ಲ.

ಕನ್ನಡ ಭಾಷೆ ಕುರಿತು ಪರೀಕ್ಷೆ ತೆಗೆದುಕೊಂಡಿದ್ದ ಪರೀಕ್ಷಾರ್ಥಿಗಳಿಗೆ ಸುಮಾರು 60ಕ್ಕೂ ಹೆಚ್ಚು ಹಿಂದಿ ಪ್ರಶ್ನೆಗಳನ್ನೇ ಕೊಟ್ಟಿದ್ದರಿಂದ ಗೊಂದಲಕ್ಕೀಡಾಗ ಕೆಲಕಾಲ ಗೊಂದಕ್ಕೀಡಾದರು. ನಾವು ಕನ್ನಡ ವಿಷಯ ಆಯ್ಕೆ ಮಾಡಿದ್ದೇವೆ. ಕನ್ನಡ ಪ್ರಶ್ನೆ ಪತ್ರಿಕೆ ಕೊಡಿ ಎಂದು ಅಲ್ಲಿನ ಮುಖ್ಯಸ್ಥರಿಗೆ ಹೇಳಿದ್ರೂ ತಾಂತ್ರಿಕ ಸಮಸ್ಯೆ ಆಗಿದೆ. ಸ್ವಲ್ಪ ಕಾಯಿರಿ ಎಂದಿದ್ದಾರೆ. ಸುಮಾರು 3 ತಾಸು ಕಾದರೂ ಕನ್ನಡ ಪ್ರಶ್ನೆ ಪತ್ರಿಕೆ ಬಂದಿಲ್ಲ. ಬೆಂಗಳೂರಿನ ಆರ್​ಟಿ ನಗರದ ಇ ಮೆರಿಟ್​ ಸೆಂಟರ್​ನಲ್ಲೂ ಇದೇ ಪರಿಸ್ಥಿತಿ.

ನಾನು ಎನ್​ಇಟಿ ಪರೀಕ್ಷೆಯಲ್ಲಿ ಕನ್ನಡ ವಿಷದಲ್ಲಿ ಆಯ್ಕೆ ಮಾಡಿಕೊಂಡಿದ್ದೆ. ಬೆಂಗಳೂರಿನ ಆರ್.​ಟಿ. ನಗರದ ಇ ಮೆರಿಟ್​ ಸೆಂಟರ್​ನಲ್ಲಿ ಎಕ್ಸಾಂಗೆಂದು ನಿಗದಿತ ಸಮಯಕ್ಕೆ ಹಾಜರಾದೆ. ನನ್ನಂತೆ 200ಕ್ಕೂ ಹೆಚ್ಚು ಮಂದಿ ಕನ್ನಡ ಪರೀಕ್ಷೆ ಬರೆಯಲು ಬಂದಿದ್ದಾರೆ. ಕನ್ನಡ ಪ್ರಶ್ನೆ ಪತ್ರಿಕೆ ಬದಲು ಹಿಂದಿ ಬಂದಿದೆ. ಕೇಳಿದ್ರೆ ಇಲ್ಲಿನ ಸಿಬ್ಬಂದಿ ಸರಿಯಾಗಿ ಸ್ಪಂದಿಸ್ತಿಲ್ಲ. ಮಧ್ಯಾಹ್ನ 12 ಗಂಟೆಯಾದರೂ ಪ್ರಶ್ನೆ ಪತ್ರಿಕೆ ಬಂದಿಲ್ಲ. 10-15 ಮಂದಿಗೆ ಕನ್ನಡ ಪ್ರಶ್ನೆ ಪತ್ರಿಕೆ ಸಿಕ್ಕಿದ್ದು, ಅವರೆಲ್ಲರಿಗೂ ಕಾಪಿ ಮಾಡಲು ಬಿಟ್ಟಿದ್ದಾರೆ. ಇದನ್ನು ಪ್ರಶ್ನಿಸಿದ ನಮ್ಮನ್ನು ಇಲ್ಲಿನ ಸಿಬ್ಬಂದಿ ಹೊರ ಹೋಗುವಂತೆ ಗದರಿದರು ಎಂದು ನೊಂದ ಅಭ್ಯರ್ಥಿಯೊಬ್ಬರು ಪರೀಕ್ಷಾ ಕೇಂದ್ರದ ಆವರಣದಿಂದಲೇ ವಿಜಯವಾಣಿಗೆ ಕರೆ ಮಾಡಿ ಅಳಲು ತೋಡಿಕೊಂಡರು.

ಹುಬ್ಬಳ್ಳಿ ನಗರದ ಚೇತನಾ ಬಿಜಿನೆಸ್ ಸ್ಕೂಲ್​ನಲ್ಲಿ ನಡೆಯಬೇಕಿದ್ದ ಎನ್​ಇಟಿ ಪರೀಕ್ಷೆಯಲ್ಲೂ ಕನ್ನಡ ಪ್ರಶ್ನೆ ಪತ್ರಿಕೆ ಬದಲು ಹಿಂದಿ‌ಪ್ರಶ್ನೆಗಳು ಬಂದಿವೆ.

ಕೆಲವರಿಗೆ ಸರಿಯಾದ ಪ್ರಶ್ನೆಪತ್ರಿಕೆ ಸಿಕ್ಕಿತ್ತು. ಹಾಗಾಗಿ ಅವರು ಪರೀಕ್ಷೆ ಬರೆದು ಹಂತಿಮವಾಗಿ submit ಮಾಡಲು ಹೋದರೆ ಸ್ವೀಕರಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net