

ಪಿ.ಎಚ್. ಕೃಷ್ಣಮೂರ್ತಿ ಮಾಯಕೊಂಡ
ಮಾಯಕೊಂಡದ ಎಕೆ ಕಾಲನಿ, ಅಭಿವೃದ್ಧಿಯಿಂದ ದೂರ ಉಳಿದಿದೆ. ಸ್ವಚ್ಛತೆ ಮರೀಚಿಕೆಯಾಗಿದೆ. ಚರಂಡಿಗಳು ಹೂಳು ತುಂಬಿ ದುರ್ವಾಸನೆ ಬೀರುತ್ತಿದ್ದರೆ, ಕಿಷ್ಕಿಂದೆಯಂಥ ಜಾಗದಲ್ಲಿ ವಾಸಿಸುತ್ತಿರುವ ಸ್ಥಳೀಯರಿಗೆ ಮನೆಗಳ ಸುತ್ತಮುತ್ತಲ ತಿಪ್ಪೆಗಳ ರಾಶಿಯೇ ದೊಡ್ಡ ಸಮಸ್ಯೆಯಾಗಿದೆ. ಒಟ್ಟಾರೆ ಕಾಲನಿಯ ಸ್ಥಿತಿ ಅಕ್ಷರಶಃ ನರಕ ಸದೃಶವೇ ಸರಿ.
ಮಾಯಕೊಂಡ, ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಾನದ ಗ್ರಾಮವಾಗಿದ್ದು ಗ್ರೇಡ್ 1 ಗ್ರಾಮ ಪಂಚಾಯಿತಿಯಾಗಿದೆ. ಈ ಒಂದೇ ಗ್ರಾಮದಲ್ಲಿ 15 ಜನ ಸದಸ್ಯರಿದ್ದಾರೆ. ಆದರೆ ದೀಪದ ಕೆಳಗೆ ಕತ್ತಲು ಎಂಬಂತೆ ಈ ಕಾಲನಿ ಸ್ವಚ್ಛತೆ ಮಾತ್ರ ಪಂಚಾಯಿತಿ ಗಮನದಿಂದ ದೂರವಾಗಿದೆ. ಆಡಳಿತದ ಅವಕೃಪೆಗೆ ಒಳಗಾಗಿದೆ.
ಕಾಲನಿಯಲ್ಲಿ 100 ಮನೆಗಳಿವೆ. ಕಿಷ್ಕಿಂದೆ ಜಾಗದಲ್ಲಿ ಸಣ್ಣಪುಟ್ಟ ಮನೆಗಳಲ್ಲಿ 2 ರಿಂದ ನಾಲ್ವರು ಕುಟುಂಬ ಸದಸ್ಯರು ಒಟ್ಟಿಗೆ ವಾಸಿಸುತ್ತಿರುವುದು ಸಾಮಾನ್ಯವಾಗಿದೆ. ಇವು ಸುಮಾರು ವರ್ಷಗಳ ಹಳೆಯ ಮನೆಗಳಾಗಿದ್ದು ವಾಸಿಸುವುದಕ್ಕೆ ಮನೆಗಳಲ್ಲಿ ಜಾಗ ಇಲ್ಲ, ಅವುಗಳಲ್ಲೇ ಶೌಚಗೃಹ ನಿರ್ಮಿಸಿಕೊಂಡು, ಕೂಡು ಕುಟುಂಬಗಳು ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ ಎಂಬುದು ಕಾಲನಿ ನಿವಾಸಿಗಳ ಮಾತು.
ನೂರು ಮನೆಗಳಿರುವ ಕಾಲನಿಯಲ್ಲಿ ರಸ್ತೆ, ಚರಂಡಿ, ಕುಡಿವ ನೀರು ಸೇರಿ ಅಭಿವೃದ್ಧಿ ಕೆಲಸಗಳು ಅಷ್ಟಕಷ್ಟೇ. ಶಾಸಕರು, ಜಿಲ್ಲಾಧಿಕಾರಿ, ಸ್ಥಳೀಯ ಗ್ರಾಮ ಪಂಚಾಯತಿಯವರು ಸಹ ಅಭಿವೃದ್ಧಿ ಕಡೆ ಗಮನಹರಿಸದೆ ನಿರ್ಲಕ್ಷೃ ವಹಿಸಿದ್ದಾರೆ.
ಪಾಂಡುರಂಗಪ್ಪ, ಗ್ರಾಮ ನಿವಾಸಿ
ಕಾಲನಿಯ ಜನಸಂಖ್ಯೆ ಹೆಚ್ಚುತ್ತಿದೆ. ಆದರೂ ಸರ್ಕಾರ ಜನರಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಒದಗಿಸುವಲ್ಲಿ ಗಮನಹರಿಸುತ್ತಿಲ್ಲ. ಶಾಸಕರು, ಜಿಲ್ಲಾಧಿಕಾರಿ ಗಮನಹರಿಸಿ ಗ್ರಾಮದಲ್ಲಿ ಸುಮಾರು 50-60 ವರ್ಷಗಳಿಂದ 22 ಎಕರೆ ಬಳಕೆ ಇಲ್ಲದೆ ಪಾಳು ಬಿದ್ದಿರುವ ಎಪಿಎಂಸಿ ಪ್ರಾಂಗಣದಲ್ಲಿ ನಾಲ್ಕೈದು ಎಕರೆ ಪ್ರದೇಶವನ್ನು ಎಕೆ ಕಾಲನಿ ಜನರ ನಿವೇಶನಕ್ಕೆ ಮಂಜೂರು ಮಾಡಿದಲ್ಲಿ ಮನೆ ನಿರ್ಮಿಸಿಕೊಂಡು ಉತ್ತಮ ಜೀವನ ನಡೆಸಲು ಅನುಕೂಲವಾಗುತ್ತದೆ.
ಪರಶುರಾಮ್, ಗ್ರಾಪಂ ಮಾಜಿ ಸದಸ್ಯ ಹಾಗೂ ಗ್ರಾಮ ನಿವಾಸಿ
ಸದ್ಯದಲ್ಲಿ ಮಾಯಕೊಂಡ ಎಕೆ ಕಾಲನಿಗೆ ಭೇಟಿ ನೀಡಿ ವಾಸ್ತವತೆ ಹಾಗೂ ಸ್ಥಿತಿಗತಿಯ ಕುರಿತು ಪರಿಶೀಲನೆ ನಡೆಸಿ ಅಭಿವೃದ್ಧಿಯ ಅಗತ್ಯತೆಗಳನ್ನು ಹಂತ ಹಂತವಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು.
ರಾಮಬೋವಿ, ತಾಪಂ ಇಒ