

ಚಿತ್ರದುರ್ಗ: ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸುವ ಅಂಶ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯಲ್ಲಿದೆ ಎಂದು ನನಗೂ ಅನಿಸಿದೆ. ಆದರೆ, ಕೆಲ ಸಮುದಾಯಗಳು ಈ ಸೌಲಭ್ಯದಿಂದ ವಂಚಿತವಾಗಲಿದೆ ಎಂದು ಯಾರು ತಪ್ಪು ಕಲ್ಪನೆ ಸೃಷ್ಟಿಸಿದ್ದಾರೋ ಅರ್ಥವಾಗುತ್ತಿಲ್ಲ. ಹೀಗಾಗಿ, ವರದಿ ಕುರಿತು ಸದನದಲ್ಲೇ ಮುಕ್ತವಾಗಿ ಚರ್ಚೆಯಾಗಬೇಕು ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.
ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾದಿಗ ಸಮುದಾಯ ಈ ಆಯೋಗದ ವರದಿಯಂತೆ ಒಳಮೀಸಲಾತಿ ಕಲ್ಪಿಸಿ ಎಂಬ ಬೇಡಿಕೆ ಇಟ್ಟಿದೆ. ಇದು ಸರಿ ಇದೆಯಾ? ಹಾವನೂರು, ಚಿನ್ನಸ್ವಾಮಿರೆಡ್ಡಿ ವರದಿಯಲ್ಲೇನಿದೆ? ಪ್ರಸ್ತುತ ಆರ್ಥಿಕ ಸ್ಥಿತಿ-ಗತಿ ಹೇಗಿದೆ? ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಲು ಸಚಿವ ಸಂಪುಟದ ಉಪಸಮಿತಿ ರಚಿಸಲಾಗಿದೆ. ಏಕಾಏಕಿ ಸಚಿವ ಮಾಧುಸ್ವಾಮಿ ಸಲ್ಲಿಸುವ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವುದಿಲ್ಲ. ಏಕೆ ಆತುರ ಪಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದರು.
ಅಧಿಕಾರಕ್ಕೆ ಬಂದರೆ ಆಯೋಗದ ವರದಿ ಜಾರಿಗೊಳಿಸುತ್ತೇವೆಂದು ಕಾಂಗ್ರೆಸ್ ನಾಯಕರು ಎಸ್ಸಿ, ಎಸ್ಟಿ ಏಕತಾ ಸಮಾವೇಶದಲ್ಲಿ ಘೋಷಿಸಿದ್ದಾರೆ. ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದ ವೇಳೆ ಏಕೆ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲಿಲ್ಲ. ಅವರಿಗೆ ಪ್ರಾಮಾಣಿಕತೆ ಮತ್ತು ಸಾಮಾಜಿಕ ಕಳಕಳಿ ಇದ್ದಿದ್ದರೆ, ತಪ್ಪು ಮಾಡಿಲ್ಲ ಅನಿಸಿದ್ದರೆ, ನೇರವಾಗಿ ಮಾತನಾಡಬೇಕು. ತಾಕತ್ತು ಇದ್ದರೆ, ಬಹಿರಂಗವಾಗಿ ಚರ್ಚೆಗೆ ಬರಲಿ ಎಂದು ಆಹ್ವಾನಿಸಿದರು.
ಕೆಲವರಿಗೆ ಚುನಾವಣೆ ಸಮೀಪಿಸುತ್ತಿದ್ದಂತೆ ನಾಲಿಗೆ ಮೇಲೆ ಹಿಡಿತವಿರುವುದಿಲ್ಲ. ಹಿಡಿತ ಸಾಧಿಸಿದಾಗ ಮಾತ್ರ ಸಂಸ್ಕೃತಿ ಮತ್ತು ರಾಜಕೀಯಕ್ಕೆ ಗೌರವ ಹೆಚ್ಚಾಗುತ್ತದೆ. ಇದನ್ನು ಹಲವರು ಮೊದಲು ಅರ್ಥಮಾಡಿಕೊಳ್ಳಬೇಕು ಎಂದರು.
ಲೋಕಸಭೆಯಾಗಲಿ, ವಿಧಾನಸಭೆಯಾಗಲಿ ಸಂವಿಧಾನದಲ್ಲಿ ಇರುವ ಅಂಶ ಬಿಟ್ಟು ಬೇರೆ ಯಾವುದನ್ನೂ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಮೀಸಲಾತಿ ಹೆಚ್ಚಾಗಬೇಕು ಎಂಬುದಾಗಿ ಹಲವು ರಾಜ್ಯಗಳಲ್ಲಿ ಪ್ರಯತ್ನ ನಡೆಯುತ್ತಿವೆ. ಷೆಡ್ಯೂಲ್ 9 ಅಡಿ ವಿಶೇಷ ಸಂದರ್ಭವೆಂದು ಪರಿಗಣಿಸಿ, ವರದಿಗಳ ಅನ್ವಯ ಜನಸಂಖ್ಯೆ ಆಧಾರದಲ್ಲೇ ಮೀಸಲಾತಿ ಕಲ್ಪಿಸಲು ಸಿದ್ಧರಿದ್ದೇವೆ ಎಂದು ಸಿಎಂ ಸದನದಲ್ಲೇ ಹೇಳಿದ್ದಾರೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಡಿ ಪ್ರತಿ 10 ವರ್ಷಕ್ಕೊಮ್ಮೆ ಮೀಸಲಾತಿ ಹೆಚ್ಚಿಸಲು ಅನುವು ಮಾಡಿಕೊಟ್ಟಿದ್ದಾರೆ. ಆದರೆ, 75 ವರ್ಷ ಆಳ್ವಿಕೆ ನಡೆಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅವಧಿಯಲ್ಲಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಬದಲಾವಣೆ ಆಗಿದೆಯೇ? ಎಂಬುದನ್ನು ಪರಿಗಣಿಸಬೇಕು. ಈಗಲೂ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗದ ಅದೆಷ್ಟೋ ಜನರಿದ್ದು, ಪದವಿ ಕಾಲೇಜನ್ನು ನೋಡಿಲ್ಲ.
ಹೀಗಾಗಿ, ಮೀಸಲಾತಿಯಲ್ಲಿ ಬದಲಾವಣೆ ತರಬಹುದಾ? ಈ ಎಲ್ಲ ವಿಷಯಗಳು ಸದನದಲ್ಲಿ ಮುಕ್ತವಾಗಿ ಚರ್ಚೆಯಾಗಲಿ. ಪರಿಶೀಲಿಸಿಯೇ ಎಲ್ಲರಿಗೂ ಸಮಾನ ಅವಕಾಶ ನೀಡಲು ಸರ್ಕಾರ ಬದ್ಧವಿದೆ ಎಂದರು. ಯಾರನ್ನೂ ದೂರವಿಟ್ಟು ಒಳಮೀಸಲಾತಿ ನೀಡುವ ಉದ್ದೇಶ ಇಲ್ಲ. ನನ್ನ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗಬೇಕು ಎಂಬ ಆಪೇಕ್ಷೆಯೂ ನನಗಿದೆ ಎಂದು ತಿಳಿಸಿದರು.