ಅತ್ಯಾಚಾರ ತಡೆಗೆ ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟರು ವಿನಯ್​ ಗುರೂಜಿ!

Vinay-Guruji
Published on

ರಾಯಚೂರು: ರಾಜ್ಯದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ತೀವ್ರ ಆತಂಕ ಮೂಡಿಸಿದ್ದು, ಮೈಸೂರಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಕಾಮುಕರು ಅಟ್ಟಹಾಸ ಮೆರೆದ ಬೆನ್ನಲ್ಲೇ ಇಂತಹದ್ದೇ ಹೀನ ಕೃತ್ಯ ಬೆಳಗಾವಿಯಲ್ಲೂ ಸಂಭವಿದೆ. ಒಂದು ವಾರದಿಂದ ಮೈಸೂರು, ತುಮಕೂರು, ಬೆಳಗಾವಿಯ ಗೋಕಾಕ್​ ಹೀಗೆ ನಾನಾ ಕಡೆ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿದ್ದು, ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲವೇ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ ಎಂಬ ಭೀತಿ ಹುಟ್ಟಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಅವರು ಅತ್ಯಾಚಾರ ತಡೆ ಕುರಿತುವ ಮಹತ್ವದ ಸಲಹೆ ನೀಡಿದ್ದಾರೆ.

ರಾಯಚೂರಿನಲ್ಲಿ ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಮಾತನಾಡಿದ ವಿನಯ್​ ಗುರೂಜಿ, ಅತ್ಯಾಚಾರ ಕೃತ್ಯ ಎಸೆಗಿದವರ ವಿರುದ್ಧ ಕ್ರಮ ಜರುಗಿಸಲು ಸರ್ಕಾರ ಬಿಗಿಯಾದ ಕಾನೂನು ಜಾರಿಗೊಳಿಸಬೇಕು. ನಾನು ಯಾವುದೇ ಪಕ್ಷಕ್ಕೆ ಬೈಯಲು ಇಷ್ಟ ಪಡುವುದಿಲ್ಲ. ಪ್ರಧಾನಿಮಂತ್ರಿಗೆ ಇರುವ ಜವಾಬ್ದಾರಿ ಪ್ರತಿ ಪ್ರಜೆಗೂ ಇದೆ. ಇಂಥಾ ಪ್ರಕರಣ ತಡೆಯಲು ಸರ್ಕಾರ ‌ಬಿಗಿ ಕಾನೂನು ಜಾರಿಗೆ ತರಬೇಕು. ವಿದೇಶಗಳಲ್ಲಿ ಅತ್ಯಾಚಾರ ಪ್ರಕರಣ ನಡೆದರೆ ಬೇಲ್ ಸಹ ಸಿಗಲ್ಲ. ವಿದೇಶದ ಮಾದರಿ ಕಾನೂನು ನಮ್ಮ ದೇಶದಲ್ಲಿಯೂ ಜಾರಿಗೆ ಬರಬೇಕು. ಆಗ ಜನರು ತಪ್ಪು ‌ಮಾಡಲು ಹೆದರುತ್ತಾರೆ ಎಂದು ಸಲಹೆ ನೀಡಿದ್ದಾರೆ.

ಹೆಣ್ಣು ಮಕ್ಕಳ ಸುರಕ್ಷೆತ ಕುರಿತು ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಅಗತ್ಯವಿದೆ. ಸರ್ಕಾರ ಕಾನೂನುಗಳನ್ನು ಬಿಗಿ ಮಾಡಬೇಕಾಗಿದೆ. ಸಂದರ್ಭಗಳು ಹೀಗೆ ಬರುತ್ತೆ ಅಂತ ಯಾರಿಗೂ ಕನಸು ಬೀಳಲ್ಲ. ವಿದೇಶಿ ಪ್ರಭಾವ ಮತ್ತು ಸಾಮಾಜಿಕ ಜಾಲತಾಣಗಳು ಪ್ರಭಾವ ಬೀರುತ್ತಿವೆ. ವಿದೇಶಿ ಪ್ರಭಾವಕ್ಕೆ ಯುವಕರು ಒಳಗಾಗಿದ್ದರಿಂದ ಇಂಥಾ ಕೃತ್ಯಗಳು ‌ನಡೆದಿವೆ. ನಮ್ಮ ಕಾನೂನಿನಲ್ಲಿ ಒಳಗೆ ಹೋಗಲು‌ ದಾರಿ ಇದೆ. ಬಚಾವ್ ಆಗಿ ಹೊರ ಬರಲೂ ಕಾನೂನು ಇದೆ. ಕಳ್ಳತನ ಮಾಡುವನು ಪೊಲೀಸರಿಗಿಂತ ಬುದ್ಧಿವಂತ ಇರುತ್ತಾನೆ. ಒಳಗೆ ಹೋಗುವ ಮುನ್ನವೇ ಹೊರಗಡೆ ಬರಲು ಎಲ್ಲಾ ದಾರಿಗಳನ್ನ ಕಂಡು ಕೊಂಡಿರುತ್ತಾನೆ. ತಪ್ಪಿತಸ್ಥರಿಗೆ ಶಿಕ್ಷೆ ಆಗದಿದ್ದರೆ ಇಲ್ಲಿಯೂ ತಾಲಿಬಾನ್ ವ್ಯವಸ್ಥೆ ಬಂತು ಅನ್ನಿಸುತ್ತದೆ. ಸರ್ಕಾರ ಈಗಲಾದರೂ ಸರಿಯಾದ ಕಾನೂನು ಜಾರಿಗೆ ತರಬೇಕು ಎಂದು ವಿನಯ್‌ ಗುರೂಜಿ ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net