

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೊನ್ನೆ ಐವರು ಆರೋಪಿಗಳನ್ನು ತಮಿಳುನಾಡಿನಲ್ಲಿ ಬಂಧಿಸಳಾಗಿತ್ತು. ಆ ವೇಳೆ ಒಬ್ಬ ಆರೋಪಿ ತಪ್ಪಿಸಿಕೊಂಡಿದ್ದ. ಆತನ ಜತೆ ಮತ್ತೊಬ್ಬ ಆರೋಪಿಯೂ ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿಯನ್ನು ಬಂಧಿತರು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು. ಒಟ್ಟು 7 ಆರೋಪಿಗಳು ಸೇರಿಕೊಂಡು ಕೃತ್ಯ ಎಸಗಿರುವುದು ಖಚಿತವಾದಂತಾಗಿದ್ದು, ತಲೆಮರೆಸಿಕೊಂಡಿದ್ದ ಮತ್ತಿಬ್ಬರು ಆರೋಪಿಗಳ ಸೆರೆಗೆ ಪೊಲೀಸರು ಸೋಮವಾರ ತಮಿಳುನಾಡಿಗೆ ಪ್ರಯಾಣ ಬೆಳಸಿದ್ದರು. ತಡರಾತ್ರಿ ಒಬ್ಬ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಮೂಲಕ ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ ಆರಕ್ಕೇರಿದೆ.
ಸಾಮೂಹಿಕ ಅತ್ಯಾಚಾರ ನಡೆದಿದ್ದ ಚಾಮುಂಡಿಬೆಟ್ಟ ತಪ್ಪಲಿನ ಪ್ರದೇಶಕ್ಕೆ ಸೋಮವಾರ ಪೊಲೀಸರು ಐವರು ಆರೋಪಿಗಳನ್ನು ಕರೆದೊಯ್ದು ಮಹಜರು ನಡೆಸಿದ್ದರು. ಆರೋಪಿಗಳು ಮದ್ಯ ಸೇವಿಸಿದ್ದ ಜಾಗ, ವಿದ್ಯಾರ್ಥಿಗಳನ್ನು ಅಡ್ಡಗಟ್ಟಿದ್ದ, ಸಂತ್ರಸ್ತೆಯ ಸ್ನೇಹಿತನಿಗೆ ಹೊಡೆದಿದ್ದ ಹಾಗೂ ವಿದ್ಯಾರ್ಥಿನಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ್ದ ಸ್ಥಳಗಳ ಬಗ್ಗೆ ಆರೋಪಿಗಳಿಂದ ಸಂಪೂರ್ಣ ಮಾಹಿತಿ ಪಡೆದರು ಎನ್ನಲಾಗಿದೆ.
ಮಹಜರು ಸ್ಥಳಕ್ಕೆ ಭೇಟಿ ನೀಡಲು ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಪೊಲೀಸರು ಅವಕಾಶ ನೀಡಲಿಲ್ಲ. ನಂತರ ಆರೋಪಿಗಳನ್ನು ಪೊಲೀಸರು ಮತ್ತೆ ಅಜ್ಞಾತ ಸ್ಥಳಕ್ಕೆ ಕರೆದೊಯ್ದರು.