

ಮೈಸೂರು: ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಒಂದೇ ತಿಂಗಳಲ್ಲಿ ಮೂರೂವರೆ ಕೋಟಿ ರೂ. ಹರಿದು ಬಂದಿದೆ. ಇದು ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ದೇವಾಲಯದಲ್ಲಿ ಸಂಗ್ರಹವಾದ ದಾಖಲೆಯ ಆದಾಯ. ಹುಂಡಿಯ ಕಾಣಿಕೆ ಹಣ ಮತ್ತು ಪ್ರವೇಶ ಟಿಕೆಟ್ ಸೇರಿಸಿ ಇಷ್ಟು ಹಣ ಬಂದಿದೆ.
ದೇವಸ್ಥಾನದಲ್ಲಿ ಸೋಮವಾರ ಹುಂಡಿ ಎಣಿಕೆ ಕಾರ್ಯ ನಡೆಯಿತು. 250 ಜನರು ದಿನವಿಡೀ ಎಣಿಕೆ ಮಾಡಿದರು. ವಿವಿಧ ನೋಟುಗಳ ರೂಪದಲ್ಲಿ 2,29,93,739 ಕೋಟಿ ರೂ. ಬಂದಿದ್ದರೆ, ನಾಣ್ಯದ ರೂಪದಲ್ಲಿ 3,57,531 ರೂ. ಬಂದಿದೆ. ಒಟ್ಟು 2,33,51, 270 ರೂ. ಸಂಗ್ರಹವಾಗಿದೆ. 270 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಸಂದಾಯವಾಗಿದೆ. ಪ್ರವೇಶ ಟಿಕೆಟ್ನಿಂದ 1.3 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
ಹಣವನ್ನು ಚಾಮುಂಡಿಬೆಟ್ಟದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ಗೆ ಜಮಾ ಮಾಡಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ.ಕೃಷ್ಣ ತಿಳಿಸಿದ್ದಾರೆ.
ರದ್ದಾದ ನೋಟುಗಳು ಪತ್ತೆ: ಅಮಾನ್ಯಗೊಳಿಸಿರುವ 500, 1000 ರೂ. ಮುಖಬೆಲೆಯ ನೋಟುಗಳು ಹುಂಡಿಯಲ್ಲಿದ್ದವು. ಒಂದು ಲಕ್ಕೂ ಅಧಿಕ ಬೆಲೆಯ ರದ್ದಾದ ನೋಟುಗಳು ಪತ್ತೆಯಾಗಿವೆ.