ಗಾರೆ ಕೆಲಸ ಮಾಡಿಕೊಂಡೇ ಓದಿದ ಮೈಸೂರು ವಿವಿ ವಿದ್ಯಾರ್ಥಿಗೆ 14 ಸ್ವರ್ಣ ಪದಕ, 3 ನಗದು ಬಹುಮಾನ!

New Project(17)
Published on

| ಕಿರಣ್​ ಮಾದರಹಳ್ಳಿ ಚಾಮರಾಜನಗರ

ಬದುಕೆಂಬ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಡತನ ಕಲಿಸಿದ ಪಾಠಕ್ಕೆ ಸವಾಲು ಹಾಕಿ ಗಾರೆ ಕೆಲಸ, ಪೇಂಟಿಂಗ್​ ಮಾಡಿಕೊಂಡು ಓದು ಮುಂದುವರಿಸಿರುವ ಈ ವಿದ್ಯಾರ್ಥಿ ಮೈಸೂರು ವಿಶ್ವವಿದ್ಯಾಲಯದ 102ನೇ ಟಿಕೋತ್ಸವದಲ್ಲಿ 14 ಚಿನ್ನದ ಪದಕ ಮತ್ತು 3 ನಗದು ಬಹುಮಾನ ಸ್ವೀಕರಿಸಲಿದ್ದಾರೆ.

ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದ ದಿ.ಪುಟ್ಟಬಸವಯ್ಯ ಮತ್ತು ನಾಗಮ್ಮ ಅವರ ಪುತ್ರ, ಡಾ.ಬಿ.ಆರ್​. ಅಂಬೇಡ್ಕರ್​ ಸ್ನಾತಕೋತ್ತರ ಕೇಂದ್ರ ಕನ್ನಡ ವಿಭಾಗದ ವಿದ್ಯಾರ್ಥಿ ಪಿ.ಮಹದೇವಸ್ವಾಮಿ ಬಡತನದಲ್ಲಿ ಅರಳಿದ 'ಚಿನ್ನದಂತಹ ಪ್ರತಿಭೆ'. ಮಾ.22ರಂದು ವಿವಿ ಘಟಿಕೋತ್ಸವದಲ್ಲಿ ಇವರ ಮೇರು ಸಾಧನೆಗೆ ಗೌರವ ಸಲ್ಲಿಕೆಯಾಗಲಿದೆ.

ತಂದೆ ತೀರಿಕೊಂಡು 20 ವರ್ಷಗಳೇ ಉರುಳಿವೆ. ತಾಯಿ ಮತ್ತು ಅಣ್ಣ, ತಮ್ಮಂದಿರು ಕೂಲಿ ಮಾಡಿ ಸಂಸಾರ ಸಾಗಿಸುತ್ತಿದ್ದಾರೆ. ಈ ಸಂದಿಗ್ಧತೆಯಲ್ಲಿ ಮಹದೇವಸ್ವಾಮಿ ಕಾಲೇಜು ರಜಾ ದಿನಗಳಲ್ಲಿ ಗಾರೆ ಕೆಲಸ, ಪೇಂಟಿಂಗ್​ ಮಾಡಿಕೊಂಡು ವಿದ್ಯಾಭ್ಯಾಸ ನಡೆಸಿದ್ದಾರೆ. ಮುಂಜಾನೆ ಮತ್ತು ರಾತ್ರಿ ಓದುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಪರಿಣಾಮ ಎಂಎ ಕನ್ನಡದ 4 ಸೆಮಿಸ್ಟರ್​ಗಳಲ್ಲಿ 22 ಪತ್ರಿಕೆಗಳ ಒಟ್ಟು 2200 ಅಂಕಗಳಿಗೆ 1963 ಅಂಕಗಳಿಸಿದ್ದಾರೆ.

ಇವರಿಗೆ ಈ ಮೊದಲೇ ಮೈಸೂರು ವಿವಿಯಿಂದ ಚಿನ್ನದ ಪದಕ ದಕ್ಕಿತ್ತು. ಮಂಡ್ಯ ಜಿಲ್ಲೆಯ ಮಳವಳ್ಳಿಯ ಭಗವಾನ್​ ಬುದ್ಧ ಬಿಇಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಓದುತ್ತಿದ್ದಾಗ ಮೊದಲ ರ್ಯಾಂಕ್​ನೊಂದಿಗೆ 2 ಚಿನ್ನದ ಪದಕ, 2 ನಗದು ಬಹುಮಾನ ಪಡೆದಿದ್ದರು.

ಚಾಮರಾಜನಗರದ ಪಿಜಿ ಸೆಂಟರ್​ನಲ್ಲಿ 2015-16ರಲ್ಲಿ ಕನ್ನಡ ವಿಭಾಗ ಸ್ಥಾಪನೆಯಾಯಿತು. ಈವರೆಗೆ ಒಟ್ಟು 45 ಚಿನ್ನದ ಪದಕಗಳು ವಿಭಾಗಕ್ಕೆ ಬಂದಿವೆ. ಅವುಗಳಲ್ಲಿ 14 ಚಿನ್ನದ ಪದಕ ಪಡೆಯುತ್ತಿರುವ ಮೊದಲ ವಿದ್ಯಾರ್ಥಿ ಮಹದೇವಸ್ವಾಮಿ ಎಂದು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪಿ.ಮಹೇಶ್​ಬಾಬು ಹೆಮ್ಮೆಯಿಂದ ಹೇಳುತ್ತಾರೆ.

ಚಿನ್ನದ ಪದಕಗಳ್ಯಾವುವು?: ನರಸಮ್ಮ ನಾರಾಯಣಶಾಸ್ತ್ರಿ, ಬಿ.ಎಸ್​.ತಮ್ಮಯ್ಯ, ಕುಪ್ಪಳ್ಳಿ ಸೀತಮ್ಮ ವೆಂಕಟಪ್ಪ, ಮಾಸ್ತಿ ಶ್ರೀನಿವಾಸ, ಪ್ರೊ.ಟಿ.ಎನ್​.ಶ್ರೀಕಂಠಯ್ಯ, ಎಚ್​.ಎಸ್​.ಶಂಕರಲಿಂಗೇಗೌಡ ಮತ್ತು ಎನ್​.ಕೆ.ನಾಗಲಕ್ಷ್ಮಮ, ವಿಶ್ವನಾಥರಾವ್​ ಹಾಗೂ ರಘುನಾಥ ರಾವ್​ ದೇಶ್​ಪಾಂಡೆ, ಮಹಾಜನ ಎಜುಕೇಷನ್​ ಸೊಸೈಟಿ, ಗೌರಮ್ಮ ಗುಂಡಪ್ಪ, ಪ್ರೊ.ಎಂ.ಪಿ.ಶಾಸಿ, ಪ್ರೊ.ವಿ.ಕೆ.ನಟರಾಜ್​, ಪ್ರೊ.ಬಿ.ರಾಮಚಂದ್ರರಾವ್​, ಕುಣಗಳ್ಳಿ ಲಲಿತಮ್ಮ ಎಸ್​. ಅಶ್ವತ್ಥನಾರಾಯಣ, ಬೇಡಿಗನಹಳ್ಳಿ ಚೆಲವಶೆಟ್ಟಿ ಮುದ್ದಮ್ಮ ಚಿನ್ನದ ಪದಕಗಳು, ಮಹಾವಿದ್ವಾನ್​ ಅಂಬಳೆ ರಾಮ ಕೃಷ್ಣಶಾಸ್ತ್ರಿ, ದಿ.ಪದ್ಮ ಶಾರದಾ, ಭದ್ರಬಾಹು ನಗದು ಬಹುಮಾನ ಮಹದೇವಸ್ವಾಮಿ ಅವರ ಮುಡಿಗೇರಲಿವೆ.

ಯುಪಿಎಸ್ಸಿ/ಕೆಪಿಎಸ್ಸಿ ಗುರಿ: ನಾಗವಳ್ಳಿ ಮಹದೇವಸ್ವಾಮಿಗೆ ಮುಂದೆ ಯುಪಿಎಸ್ಸಿ ಅಥವಾ ಕೆಪಿಎಸ್ಸಿ ಪರೀಕ್ಷೆ ಪಾಸ್​ ಮಾಡಿ ಸಾರ್ವಜನಿಕ ಸೇವೆ ಮಾಡುವ ಗುರಿ ಹೊಂದಿದ್ದಾರೆ. ಎಂಎ ತೃತೀಯ ಸೆಮಿಸ್ಟರ್​ ಓದುವಾಗಲೇ ಕೆ-ಸೆಟ್​ ಬರೆದು ಉತ್ತೀರ್ಣರಾಗಿದ್ದಾರೆ. ಐಎಎಸ್​, ಕೆಎಎಸ್​ ಉಚಿತ ತರಬೇತಿ ಸಿಕ್ಕಿದರೆ ಅಥವಾ ಬೇರೆಯವರಿಂದ ನೆರವು ದೊರೆತರೆ ಹಳ್ಳಿಗಾಡಿನ ಬಡ ಯುವಕನೊಬ್ಬನ ಕನಸು ನನಸಾಗಲಿದೆ.

ಪೇಂಟಿಂಗ್​ ಮಾಡುತ್ತಿರುವ ಮಹದೇವಸ್ವಾಮಿ.
ಪೇಂಟಿಂಗ್​ ಮಾಡುತ್ತಿರುವ ಮಹದೇವಸ್ವಾಮಿ.

ಜ್ಞಾನ, ಪ್ರತಿಭೆಯಲ್ಲಿ ಮುಂದು: ಹಳ್ಳಿಗಾಡಿನ ಮಕ್ಕಳು ಕಷ್ಟಪಟ್ಟು ಓದುತ್ತಿದ್ದಾರೆ. ಇದೇ ಕಾಲೇಜಿನ ಕನ್ನಡ ವಿಭಾಗದಲ್ಲಿ ಕಳೆದ ವರ್ಷ 10 ಚಿನ್ನದ ಪದಕ ಮತ್ತು 4 ನಗದು ಬಹುಮಾನ ಗಳಿಸಿದ್ದ ಮಾದಲಾಂಬಿಕಾಗೆ ಸುತ್ತೂರು ಶ್ರೀಗಳು ತನ್ನ ಸಂಸ್ಥೆಯಲ್ಲಿ ಕೆಲಸ ನೀಡಿ ಪ್ರೋತ್ಸಾಹಿಸಿದ್ದಾರೆ. ಮಹದೇವಸ್ವಾಮಿಯೂ ಗುರಿ ತಲುಪುವಂತಾಗಲಿ ಎಂದು ಕನ್ನಡ ವಿಭಾಗದ ಮುಖ್ಯಸ್ಥ ಕೃಷ್ಣಮೂರ್ತಿ ಹನೂರು ಮತ್ತು ಕೆಲ ತಿಂಗಳ ಹಿಂದೆ ನಿವೃತ್ತರಾದ ಕಾಲೇಜಿನ ನಿರ್ದೇಶಕ ಪ್ರೊ.ಕರಿಬಸವಯ್ಯ ಆಶಿಸಿದ್ದಾರೆ.

ಕನ್ನಡ ವಿಭಾಗದ ಮುಖ್ಯಸ್ಥ ಕೃಷ್ಣಮೂರ್ತಿ ಹನೂರರ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ ಕೇಂದ್ರಕ್ಕೆ ಪ್ರತಿ ವರ್ಷ ಚಿನ್ನದ ಪದಕಗಳು ಸಿಗುತ್ತಿವೆ. ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಸಾಧನೆ ಗಮನಿಸಿದರೆ ಚಾಮರಾಜನಗರ ಜಿಲ್ಲೆ ಆಲೋಚನೆಯಲ್ಲಿ ಮಾತ್ರ ಹಿಂದುಳಿದಿದೆಯೇ ಹೊರತು ಜ್ಞಾನ ಮತ್ತು ಪ್ರತಿಭೆಯಲ್ಲಲ್ಲ ಎಂದು ಮೈಸೂರು ವಿವಿ ಸಿಂಡಿಕೇಟ್​ ಸದಸ್ಯ ಪ್ರದಿಪ್​ಕುಮಾರ ದೀಕ್ಷಿತ್​ ಅಭಿಪ್ರಾಯಪಟ್ಟಿದ್ದಾರೆ.

ಮಹದೇವಸ್ವಾಮಿ ಜೀವನ ಪ್ರಜ್ಞೆ ಇರುವ ವಿದ್ಯಾರ್ಥಿ. ಕಾಲೇಜು ರಜಾ ದಿನಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಓದಿನಲ್ಲಿ ಅವರಿಗೆ ಇರುವ ಶ್ರದ್ಧೆ ಗಮನಿಸಿ ಕನಿಷ್ಠ 10 ಚಿನ್ನದ ಪದಕ ಮತ್ತು 4 ನಗದು ಬಹುಮಾನ ಸಿಗುತ್ತದೆ ಎಂದು ನಿರೀಕ್ಷಿಸಿದ್ದೆ. ಇಂತಹ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ನಮಗೆ ಹೆಮ್ಮೆ ಎನಿಸಿದೆ.

|ಮೂಕಳ್ಳಿ ಬಸವಣ್ಣ ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ.

ಸ್ನಾತಕೋತ್ತರ ಕೇಂದ್ರದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳು ಓದಿನಲ್ಲಿ ಸಾಧನೆ ಮಾಡುತ್ತಿದ್ದಾರೆ. ವಿದ್ಯಾರ್ಥಿ ಮಹದೇವಸ್ವಾಮಿ 14 ಚಿನ್ನದ ಪದಕ ಮತ್ತು 3 ನಗದು ಬಹುಮಾನ ಗಳಿಸಿರುವುದ ಸಂತಸ ತಂದಿದೆ.

|ಪ್ರೊ.ಆರ್​.ಮಹೇಶ್​ ನಿರ್ದೇಶಕ, ಡಾ.ಬಿ.ಆರ್​.ಅಂಬೇಡ್ಕರ್​ ಸ್ನಾತಕೋತ್ತರ ಕೇಂದ್ರ.

ಕಾಲೇಜಿನಲ್ಲಿ ಸ್ಥಾಪಿಸಿರುವ ದೇವಚಂದ್ರ ಕನ್ನಡ ಗ್ರಂಥಾಲಯ ಮತ್ತು ಎಲ್ಲ ಪ್ರಾಧ್ಯಾಪಕರ ಮಾರ್ಗದರ್ಶನ ಚಿನ್ನದ ಪದಕ ಗಳಿಸಲು ನೆರವಾಗಿದೆ. ಮನೆ ಕಡೆ ಆರ್ಥಿಕ ಸಮಸ್ಯೆ ಇರುವುದರಿಂದ ರಜಾ ದಿನಗಳಲ್ಲಿ ಗಾರೆ, ಪೇಂಟಿಂಗ್​ ಕೆಲಸ ಮಾಡಿದ್ದೆ. ಕನ್ನಡ ಎಂಎ ಓದುವವನು ಎಂದು ಮೂಗು ಮುರಿಯುವರ ಮುಂದೆ ಈ ಸಾಧನೆಗೆ ಅರ್ಥ ಸಿಕ್ಕಿದೆ.

|ಪಿ.ಮಹದೇವಸ್ವಾಮಿ ಚಿನ್ನದ ಪದಕ ಗಳಿಸಿರುವ ವಿದ್ಯಾರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net