

ಮೈಸೂರು: ಮಹಾಶಿವರಾತ್ರಿ ಹಬ್ಬದ ಸಡಗರ-ಸಂಭ್ರಮದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಮಿಂದೇಳುತ್ತಿದೆ. ಮನೆ ಮನಗಳಲ್ಲಿ ಮತ್ತು ಮಠ-ಮಂದಿರದಲ್ಲಿ ಶಿವನಾಮ ಸ್ಮರಣೆ, ಶಿವನಾಮ ಜಪ ಶುರುವಾಗಿದೆ. ಶಿವರಾತ್ರಿಯ ಪ್ರಮುಖ ಆಕರ್ಷಣೆಯಾದ ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಸ್ಥಾನದಲ್ಲೂ ಭರದ ಸಿದ್ಧತೆಗಳು ಜರುಗಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಖಜಾನೆಯಲ್ಲಿದ್ದ ಚಿನ್ನದ ಕೊಳಗ (ಮುಖವಾಡ)ವನ್ನು ದೇವಾಲಯಕ್ಕೆ ಹಸ್ತಾಂತರಿಸಲಾಗಿದೆ. ದೇವರ ಕೊಳಗವನ್ನು ದೇವಾಲಯದ ಅರ್ಚಕರಿಗೆ ನೀಡಲಾಗಿದೆ. ವರ್ಷಕ್ಕೊಮ್ಮೆ ಮಾತ್ರ ಶಿವಲಿಂಗಕ್ಕೆ ಧಾರಣೆಯಾಗುವ 11 ಕೆಜಿ ಅಪರಂಜಿ ಚಿನ್ನದ ಮುಖವಾಡ ನೋಡಲು ಭಕ್ತರ ದಂಡೇ ಹರಿದು ಬರುತ್ತಿದೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ಸಂದರ್ಭದಲ್ಲಿ ಜಯಚಾಮರಾಜ ಒಡೆಯರ್ ಅವರು ಅರಮನೆ ಆವರಣದಲ್ಲಿರುವ ತ್ರಿನೇತ್ರಸ್ವಾಮಿ ದೇವಾಲಯ, ನಂಜನಗೂಡಿನ ನಂಜುಂಡೇಶ್ವರ ದೇವಾಲಯ ಹಾಗೂ ಮಲೆ ಮಹದೇಶ್ವರಸ್ವಾಮಿ ದೇವಾಲಯಕ್ಕೆ ಚಿನ್ನದ ಕೊಳಗ ನೀಡಿದ್ದರು. ನಂಜನಗೂಡು ಹಾಗೂ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ನಿತ್ಯ ಚಿನ್ನದ ಕೊಳಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಆದರೆ, ಭದ್ರತೆ ದೃಷ್ಟಿಯಿಂದ ಶ್ರೀ ತ್ರಿನೇಶ್ವರಸ್ವಾಮಿ ದೇವಾಲಯದ ಕೊಳಗವನ್ನು ಜಿಲ್ಲಾ ಖಜಾನೆಯಲ್ಲಿ 1982 ರಿಂದೀಚೆಗೆ ಇಡಲಾಗುತ್ತಿದ್ದು, ವರ್ಷಕ್ಕೊಮ್ಮೆ (ಶಿವರಾತ್ರಿ ಮುನ್ನಾದಿನ) ಮಾತ್ರ ಹೊರತೆಗೆದು ಶಿವರಾತ್ರಿಯಂದು ಪೂಜೆ ಸಂದರ್ಭದಲ್ಲಿ ಬಳಸುವ ಸಂಪ್ರದಾಯವಿದೆ.
ಕೊಳಗವನ್ನು ದೇವಾಲಯಕ್ಕೆ ತಂದ ಬಳಿಕ ಅದಕ್ಕೆ ಪೂಜೆ ಸಲ್ಲಿಸಿ ಕೊಠಡಿಯೊಂದರಲ್ಲಿ ಇಡಲಾಗಿದೆ. ಮಂಗಳವಾರ ಬೆಳಗಿನ ಜಾವ 4.30ರಿಂದ ದೇವಾಲಯದಲ್ಲಿ ಅರ್ಚನೆ, ಅಭಿಷೇಕ ನಡೆದಿದ್ದು, ತ್ರಿನೇಶ್ವರಸ್ವಾಮಿ ದೇವಾಲಯದ ಮೂಲದೇವರಿಗೆ ಚಿನ್ನದ ಕೊಳಗ ಧಾರಣೆ ಮಾಡಲಾಗಿದೆ. ಭಕ್ತಾದಿಗಳ ಅನುಕೂಲಕ್ಕಾಗಿ ಬೆಳಗ್ಗೆ 6ರಿಂದ ರಾತ್ರಿ 12 ಗಂಟೆವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.