

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್ ದಿಢೀರ್ ವರ್ಗಾವಣೆಗೊಂಡಿದ್ದಾರೆ. ಭೂ ಒತ್ತುವರಿ ತೆರವು ಮಾಡಿದ್ದೇ ನಟೇಶ್ ಪಾಲಿಗೆ ಕಂಠಕವಾಯ್ತು ಎಂಬ ಮಾತು ಕೇಳಿಬಂದಿದೆ.
ಇತ್ತೀಚೆಗೆ ಮೈಸೂರಿನ ವಿಜಯನಗರ 4ನೇ ಹಂತದಲ್ಲಿ 6 ಎಕರೆ ಒತ್ತುವರಿ ಭೂಮಿಯನ್ನು ಡಾ.ಡಿ.ಬಿ.ನಟೇಶ್ ಕಾರ್ಯಾಚರಣೆ ನಡೆಸಿ ತೆರವು ಮಾಡಿದ್ದರು. ಇದರ ಬೆನ್ನಲ್ಲೇ ನಟೇಶ್ ಅವರನ್ನ ಎತ್ತಂಗಡಿ ಮಾಡಲಾಗಿದೆ. ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಮೇಲೆ ಒತ್ತಡ ತಂಡು ವರ್ಗಾವಣೆ ಮಾಡಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸರ್ಕಾರಿ ಭೂಮಿ ಒತ್ತುವರಿಗೆ ತೆರವು ಮಾಡಿದ ಮೂಡಾ ಆಯುಕ್ತರಿಗೆ ಬೆಂಬ ಕೊಡುವ ಬದಲು ಅವರ ತಲೆದಂಡ ಮಾಡಿದದು ಎಷ್ಟರ ಮಟ್ಟಿಗೆ ಸರಿ? ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
2021ರ ಜೂನ್ನಲ್ಲಿ ನಟೇಶ್ ಅವರನ್ನು ಮೊದಲ ಬಾರಿಗೆ ವರ್ಗಾವಣೆ ಮಾಡಲಾಗಿತ್ತು. ತೆರವಾದ ಈ ಸ್ಥಾನಕ್ಕೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಜಂಟಿ ನಿರ್ದೇಶಕ(ಆಡಳಿತ), ಕೆಎಎಸ್ ಹಿರಿಯ ಶ್ರೇಣಿ ಅಧಿಕಾರಿ ಶೀಲವಂತ ಎಂ.ಶಿವಕುಮಾರ್ ಅವರನ್ನು ನಿಯೋಜಿಸಲಾಗಿತ್ತು. ಆದರೆ, ಈ ಆದೇಶ ರದ್ದು ಮಾಡಿದ್ದ ಸರ್ಕಾರವು ಇದೀಗ ಮತ್ತೆ 2ನೇ ಬಾರಿಗೆ ನಟೇಶ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಕಳೆದ ಬಾರಿ ಸ್ಥಳ ತೋರಿಸಿದ್ದ ಸರ್ಕಾರವು ಈ ಸಲ ಯಾವುದೇ ಸ್ಥಳ ನಿಯುಕ್ತಿಗೊಳಿಸದೆ ವರ್ಗಾಯಿಸಿದೆ.
ಕಾಂತರಾಜ್ ವರ್ಗಾವಣೆ ಬಳಿಕ 2020ರ ಮೇ 5ರಂದು ಡಾ.ನಟೇಶ್ ಮುಡಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇಲ್ಲಿ ಒಂದೂವರೆ ವರ್ಷಕ್ಕಿಂತ ಹೆಚ್ಚು ಅವಧಿ ಕಾರ್ಯನಿರ್ವಹಿಸಿದ ಬಳಿಕ ಇವರನ್ನು ಎತ್ತಂಗಡಿ ಮಾಡಲಾಗಿದೆ. ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ಮುಡಾ ಆಯುಕ್ತರ ಹುದ್ದೆಯನ್ನು ಹೆಚ್ಚುವರಿ ಹೊಣೆಯಾಗಿ ನೀಡಲಾಗಿದೆ. (ದಿಗ್ವಿಜಯ ನ್ಯೂಸ್, ಮೈಸೂರು)