ಕೆ.ಆರ್.ಆಸ್ಪತ್ರೆಯ ವೈದ್ಯ ದಂಪತಿ ಪುತ್ರನ ಕಿಡ್ನ್ಯಾಪ್ ಕೇಸ್​ ಸುಖಾಂತ್ಯ: ಬಾಲಕ ಬಿಚ್ಚಿಟ್ಟ ಸ್ಫೋಟಕ ಮಾಹಿತಿ ಇಲ್ಲಿದೆ...

kidnap
Published on

ಮೈಸೂರು: ಕೆ.ಆರ್.ಆಸ್ಪತ್ರೆಯ ಮಕ್ಕಳ ವೈದ್ಯರಾದ ಡಾ.ಗಿರೀಶ್ ಮತ್ತು ಡಾ.ಸುಮಾ ದಂಪತಿ ಪುತ್ರನ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಕಿಡ್ನ್ಯಾಪ್​ಗೆ ಒಳಗಾಗಿದ್ದ 12 ವರ್ಷದ ಅಭಿಜಿತ್‌ನನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ.

ಕುವೆಂಪುನಗರದ ಬಿಇಎಂಎಲ್ ಬಡಾವಣೆಯ ನಿವಾಸಿ ಅಭಿಜಿತ್​, ಗುರುವಾರ ಸಂಜೆ 7 ಗಂಟೆ ಸುಮಾರಿನಲ್ಲಿ ಸೈಕಲ್ ತುಳಿಯುತ್ತಿದ್ದ. ಈ ವೇಳೆ ಅಲ್ಲಿಗೆ ಕಾರಿನಲ್ಲಿ ಬಂದ ಅಪರಿಚಿತರ ತಂಡ ಬಾಲಕನನ್ನು ಕಿಡ್ನ್ಯಾಪ್​ ಮಾಡಿತ್ತು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದರು. ಬೆಚ್ಚಿದ ದುಷ್ಕರ್ಮಿಗಳು ಮರುದಿನ ಬೆಳಗ್ಗೆ ಮಾರ್ಗದಲ್ಲೇ ಬಾಲಕನನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಬಗ್ಗೆ ಮಾತನಾಡಿರುವ ಅಭಿಜಿತ್​, ನನ್ನನ್ನು ಕಿಡ್ನ್ಯಾಪ್ ಮಾಡಿದಾಗ ಹೆದರಿಕೆಯಾಯಿತು. ಧೈರ್ಯ ತಂದುಕೊಂಡು ಕಿಡ್ನ್ಯಾಪರ್ಸ್​ ಜತೆ ಮಿಂಗಲ್ ಆಗಿ ಮಾತನಾಡಲು ಆರಂಭಿಸಿದೆ. 'ನಮ್​ ಬಗ್ಗೆ ನಿನ್ನ ಅಪ್ಪ- ಅಮ್ಮನಿಗೆ ಏನೂ ಹೇಳ್ಬಾರ್ದು. ಒಂದು ವೇಳೆ ಹೇಳಿದ್ರೆ ನಿನ್ನನ್ನು ಶಾಲೆಯಿಂದ ಎತ್ತಾಕೊಂಡು ಹೋಗಿ ಮರ್ಡರ್ ಮಾಡುತ್ತೇವೆ' ಅಂತ ಅವರು ನನಗೆ ಹೆದರಿಸಿದರು. ಅವರನ್ನ ನಾನು ಈ ಮೊದಲು ನೋಡಿಯೇ ಇಲ್ಲ. ನನ್ನನ್ನು ಕರೆದೊಯ್ಯುತ್ತಿದ್ದ ಕಾರಿನ ನಂಬರ್​ ಪ್ಲೇಟ್​ ಹಳದಿ ಬಣ್ಣದ್ದು. ಕಾರಿನ ಎರಡು ನಂಬರ್ ಮಾತ್ರ ಕಾಣಿಸಿತ್ತು. ಕಾರಿನ ಹಿಂಭಾಗದ ಸೀಟ್​ನಲ್ಲಿ ನನ್ನನ್ನು ಕೂರಿಸಿದ್ದರು. ರಿಂಗ್​ ರೋಡ್​ನ ಸರ್ಕಲ್​ನಲ್ಲಿ ನಾಲ್ಕು ಸುತ್ತು ಹಾಕಿಸಿದ್ರು. ಮೈಸೂರಿನ 20 ಕಿ.ಮೀ. ಅಂತರದಲ್ಲೇ ಸುತ್ತಾಡಿಸ್ತಾ ಇದ್ರು. ತಿನ್ನಲು ಬಿಸ್ಕತ್​ ಮತ್ತು ಚಾಕೋಲೆಟ್​, ಕುಡಿಯಲು ನೀರು ಕೊಟ್ಟರು. ನಾನು ಬೇಡ ಅಂದೆ. ಕಾರಿನಲ್ಲಿ ಒಬ್ಬ ಕುಂಟ ಇದ್ದ. 'ಕಾರಿನಲ್ಲಿ ಡೀಸೆಲ್ ಖಾಲಿಯಾಗಿದೆ. ಮ್ಯಾಕ್ಸಿಮಮ್ ಅಂದ್ರೆ 5 ಕಿ.ಮೀ. ಹೋಗಬಹುದು' ಎನ್ನುತ್ತಿದ್ದರು. ನಾನು ನಿದ್ರೆಗಣ್ಣಿನಲ್ಲಿದ್ದಾಗ ಯಾರೋ ವಿಂಡ್​ಶೀಲ್ಡ್​ನಲ್ಲಿ ಮಾತನಾಡುತ್ತಿದ್ರು...' ಎಂದು ವಿವರಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net