

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಕಾಡಿನಿಂದ ನಾಡಿನತ್ತ ಹೊರಟ ಗಜಪಡೆಗೆ ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಇಂದು ಬೆಳಗ್ಗೆ 9.30ಕ್ಕೆ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಗಿದೆ.
ದಸರಾ ಗಜಪಡೆಯಲ್ಲಿ 5 ಗಂಡಾನೆ, 3 ಹೆಣ್ಣಾನೆಗಳಿಗಳಿವೆ. ಅಂಬಾರಿ ಹೊರಲಿರುವ ಅಭಿಮನ್ಯು ದಸರಾ ಗಜಪಡೆಯ ನಾಯಕ. ಇದೇ ಮೊದಲ ಬಾರಿಗೆ ಮೈಸೂರು ದಸರಾ ಮಹೋತ್ಸವಕ್ಕೆ ಬರುತ್ತಿದ್ದಾನೆ 34 ವರ್ಷದ ಅಶ್ವತ್ಥಾಮ ಆನೆ.
58 ವರ್ಷದ ವಿಕ್ರಮ, 43 ವರ್ಷದ ಧನಂಜಯ, 44 ವರ್ಷದ ಕಾವೇರಿ, 48 ವರ್ಷದ ಚೈತ್ರಾ, 20 ವರ್ಷದ ಲಕ್ಷ್ಮೀ ಸೇರಿದಂತೆ 8 ಆನೆಗಳು ಇಂದು ಸಂಜೆಯೊಳಗೆ ಲಾರಿ ಮೂಲಕ ಮೈಸೂರಿನ ಅಶೋಕಪುರಂ ಅರಣ್ಯ ಭವನಕ್ಕೆ ಆಗಮಿಸಲಿವೆ. ಅ. 16ರಂದು ದಸರಾ ಗಜಪಡೆ ಅರಮನೆ ಆವರಣ ಪ್ರವೇಶಿಸಲಿವೆ.