

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸೆ.4ರಿಂದ ಅಂಬಾರಿ ಡಬಲ್ ಡೆಕ್ಕರ್ ಬಸ್ ಸಂಚಾರ ಆರಂಭಿಸಲಿದ್ದು, ಓಪನ್ ಟಾಪ್ ವ್ಯವಸ್ಥೆ ಹೊಂದಿರುವ ಈ ಬಸ್ನಲ್ಲೇ ಕುಳಿತು ಪ್ರವಾಸಿಗರು ಮೈಸೂರಿನ ಸೌಂದರ್ಯ ಸವಿಯಬಹುದು.
ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ ಈ ಬಸ್ ಸಾರ್ವಜನಿಕರ ಸೇವೆಗೆ ಲಭ್ಯ ಇರಲಿದೆ. ತಲಾ ಒಬ್ಬರಿಗೆ ಪ್ರಯಾಣ ದರ 250 ರೂಪಾಯಿ. ಕರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದ ಅಂಬಾರಿ ಡಬಲ್ ಡೆಕ್ಕರ್ ಬಸ್ ಸಂಚಾರವನ್ನು ಪ್ರವಾಸೋದ್ಯಮ ಅಬಿವೃದ್ಧಿ ನಿಟ್ಟಿನಲ್ಲಿ ಮತ್ತೆ ಆರಂಭಿಸಲಾಗಿದೆ. ಇನ್ನು ಕೆಲವೇ ದಿನದಲ್ಲಿ ಮೈಸೂರಲ್ಲಿ ದಸರಾ ಕಳೆಗಟ್ಟಲಿದ್ದು, ಪ್ರವಾಸಿಗರಿಗೆ ಈ ಬಸ್ ಸೇವೆ ಅನುಕೂಲಕಾರಿ.
ಹೋಟೆಲ್ ಮಯೂರ ಹೊಯ್ಸಳ, ಡಿಸಿ ಕಚೇರಿ, ಕುಕ್ಕರಹಳ್ಳಿ ಕೆರೆ, ಮೈಸೂರು ವಿವಿ, ರಾಮಸ್ವಾಮಿ ಸರ್ಕಲ್, ಸಂಸ್ಕೃತ ಪಾಠಶಾಲೆ, ಕೆ.ಆರ್.ಸರ್ಕಲ್, ದೊಡ್ಡ ಗಡಿಯಾರ, ಅರಮನೆ ದಕ್ಷಿಣ ದ್ವಾರ, ಹಾರ್ಡಿಂಗ್ ಸರ್ಕಲ್, ಮೃಗಾಲಯ, ಕಾರಂಜಿ ಕೆರೆ, ಗೌರ್ಮೆಂಟ್ ಗೆಸ್ಟ್ ಹೌಸ್, ಸಂತ ಫಿಲೋಮಿನಾ ಚರ್ಚ್, ಬನ್ನಿ ಮಂಟಪ, ಆಯುರ್ವೇದಿಕ್ ಆಸ್ಪತ್ರೆ ಸರ್ಕಲ್, ರೈಲ್ವೆ ನಿಲ್ದಾಣ ಮಾರ್ಗದಲ್ಲಿ ಸಂಚರಿಸಿ ಮತ್ತೆ ಹೋಟೆಲ್ ಮಯೂರ ಹೊಯ್ಸಳಕ್ಕೆ ಬಸ್ ತಲುಪಲಿದೆ. ಬಸ್ನಲ್ಲಿ ಪ್ರತಿ ಸ್ಥಳದ ಮಾಹಿತಿ ಆಡಿಯೋ-ವಿಡಿಯೋ ಸಿಸ್ಟಂನಿಂದ ಪ್ರಸಾರ ಆಗುತ್ತೆ.