ಹಿಜಾಬ್​ ಪ್ರಕರಣ: ಹೈಕೋರ್ಟ್​ ತೀರ್ಪು ಬರುತ್ತಿದ್ದಂತೆ ವಿಧಾನಸೌಧದಲ್ಲಿ ಸಭೆ ನಡೆಸಿದ ಮುಸ್ಲಿಂ ನಾಯಕರು

Vidhan Soudha 9 June 20
Published on

ಬೆಂಗಳೂರು: ಹಿಜಾಬ್ ವಿಚಾರವಾಗಿ ಹೈಕೋರ್ಟ್‌ ತೀರ್ಪು ಬಂದ ಹಿನ್ನೆಲೆ ವಿಧಾನಸೌಧದಲ್ಲಿ ಮುಸ್ಲಿಂ ನಾಯಕರು ಅನೌಪಚಾರಿಕ ಸಭೆ ನಡೆಸಿದರು.

ಶಾಸಕ ಜಮೀರ್ ಅಹ್ಮದ್, ಎನ್.ಎ.ಹ್ಯಾರೀಸ್, ಅಬ್ದುಲ್ ಜಬ್ಬಾರ್ ಸೇರಿ ಇತರ ನಾಯಕರು ಸಮಾಲೋಚನೆ ಮಾಡಿದರು. ತೀರ್ಪು ವಿಚಾರವಾಗಿ ಸಮಾಜದಲ್ಲಿ ಆಗುತ್ತಿರುವ ಬೆಳವಣಿಗೆ, ಹಿಜಾಬ್ ಬಗ್ಗೆ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಕುರಿತು, ಪಕ್ಷದ ಮೇಲಾಗುವ ಪರಿಣಾಮದ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಹಿರಿಯ ವಕೀಲರನ್ನು ಸಂಪರ್ಕಿಸಿ ಮುಂದೆ ಯಾವ ರೀತಿ ಹೆಜ್ಜೆ ಇರಿಸಬೇಕು, ಮೇಲ್ಮನವಿ ಪ್ರಕ್ರಿಯೆ ಹೇಗೆ ಸೇರಿದಂತೆ ಕಾನೂನು ಅಭಿಪ್ರಾಯ ಪಡೆಯುವ ಬಗ್ಗೆಯೂ ಚರ್ಚೆ ನಡೆಸಲಾಯಿತು.

ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಹ್ಯಾರೀಸ್, ಕೋರ್ಟ್ ತೀರ್ಪು ವೈಯಕ್ತಿಕ ಹಕ್ಕನ್ನು ತಡೆಯುವಂತಿರಬಾರದು. ಕೋರ್ಟ್ ತೀರ್ಪಿಗೆ ಗೌರವ ಕೊಡುತ್ತೇವೆ. ಆ ಬಗ್ಗೆ ಎರಡು ಮಾತಿಲ್ಲ. ಹಿಜಾಬ್ ಧರಿಸಬಾರದೆಂದು ಕೋರ್ಟ್‌ ಹೇಳಿಲ್ಲ. ಶಾಲೆಯಲ್ಲಿ ಸರ್ಕಾರ ಹೇಳುವುದನ್ನೇ ಪಾಲನೆ ಮಾಡಬೇಕು ಎಂದಿದೆ. ಹೀಗಾಗಿ ಸರ್ಕಾರ ದೊಡ್ಡ ಮನಸ್ಸು ಮಾಡಬೇಕು ಎಂದರು.

ಸಿ.ಎಂ‌. ಇಬ್ರಾಹಿಂ ಮಾತನಾಡಿ, ತಿಲಕ, ವಿಭೂತಿ ಅಲಂಕಾರಿಕ ವಸ್ತುವಲ್ಲ. ಅದೊಂದು ಭಕ್ತಿಯ ಸಂಕೇತ. ಹಿಜಾಬ್ ವಿಚಾರವಾಗಿ ನಾವು ಸುಪ್ರೀಂಕೋರ್ಟ್​ಗೆ ಹೋಗುತ್ತೇವೆ. ಸರ್ಕಾರ ಮಾತುಕತೆ ಮೂಲಕ‌ ಪರಿಹಾರ ಕಂಡುಕೊಳ್ಳಬೇಕು ಎಂದರು.

ಈ ಬಗ್ಗೆ ನಮ್ಮ ಸಮಾಜದ ಮುಖಂಡರು ತೀರ್ಮಾನ ತೆಗೆದುಕೊಳ್ಳುತ್ತಾರೆ‌‌. ಇದನ್ನು ಧರ್ಮದ ದೃಷ್ಟಿಯಿಂದ ನೋಡಬಾರದು. ಸಂವಿಧಾನದ ದೃಷ್ಟಿಯಿಂದ ನೋಡಬೇಕು. ಹೆಣ್ಣು ಮಗಳು ತಿಲಕ, ವಿಭೂತಿ‌ ಇಡುವುದು ಧರ್ಮದಲ್ಲಿ ಇಲ್ಲ. ಆದರೆ ಅದು ನನಗೆ ಇಡಬೇಕೆಂಬ ಇಷ್ಟವಿದೆ. ನೀವು ಬೇಡ ಅನ್ನೋಕೆ ಸಾಧ್ಯವೇ? ಎಂದು ಸಿ.ಎಂ‌ ಇಬ್ರಾಹಿಂ ಪ್ರಶ್ನಿಸಿದರು.

ತಾಯಂದಿರು ಸೆರಗು ಹಾಕುವುದು ತಪ್ಪೇ ಎಂದ ಸಿ.ಎಂ‌ ಇಬ್ರಾಹಿಂ, ತೀರ್ಪಿನಿಂದ ಬೀದಿಗಿಳಿಯಬೇಕಾದ ಅವಶ್ಯಕತೆ ಇಲ್ಲ. ನ್ಯಾಯಾಂಗದ ಮೇಲೆ ನಮಗೆ ವಿಶ್ವಾಸವಿದೆ. ಸುಪ್ರೀಂಗೆ ಹೋಗಲು ಅವಕಾಶವಿದೆ. ಲಾಯರ್ ಮಜೀದ್ ಮೆಮನ್ ಬಾಂಬೆಯವರು, ಅವರ ಜತೆಯೂ ನಾನು ಚರ್ಚೆ ಮಾಡಿದ್ದೇನೆ. ಒಗ್ಗಟ್ಟಾಗಿ ಸುಪ್ರೀಂಗೆ ಹೋಗಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಹೈಕೋರ್ಟ್ ತೀರ್ಪಿನ ಬಗ್ಗೆ ನಮಗೆ ಅಸಮಾಧಾನವಿದೆ. ಅದಕ್ಕೆ ನಾವು ಸುಪ್ರೀಂಕೋರ್ಟ್​ಗೆ ಹೋಗ್ತೇವೆ. ನಾಳೆ ವಿಭೂತಿ ಹಾಕಬಾರದು ಅಂತೀರ, ನನಗೆ ಹಾಕಬೇಕೆಂಬ ಇಷ್ಟವಿದೆ. ನನ್ನನ್ನು ತಡೆಯೋಕೆ ನಿಮಗೆ ಹೇಗೆ ಸಾಧ್ಯ? ಎಂದರು.

ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮಾತನಾಡಿ, ನಾವು ಸುಪ್ರೀಂ ಕೋರ್ಟ್​ಗೆ ಹೋಗುತ್ತೇವೆ. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸುತ್ತೇವೆ. ಮಕ್ಕಳಲ್ಲಿ ತಾರತಮ್ಯದ ಮನೋಭಾವ ಸೃಷ್ಟಿಸಲಾಗುತ್ತಿದೆ, ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಸಮವಸ್ತ್ರ ಎಲ್ಲೂ ಇಲ್ಲ. ದೇಶವನ್ನ ಪ್ರಗತಿಪರವಾಗಿ ಕಟ್ಟಬೇಕು. ದೇಶದ ಐಕ್ಯತೆಗೆ ಇವತ್ತು ಧಕ್ಕೆ ಬಂದಿದೆ. ಮತಾಂತರ ನಿಷೇಧ ಕಾಯ್ದೆ ಇರಬಹುದು, ಒಂದು ಸಮುದಾಯವನ್ನು ಟಾರ್ಗೆಟ್ ಮಾಡುವುದೇ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net