ಮನೆಯಲ್ಲಿ ಗಣೇಶ ಪ್ರತಿಷ್ಠಾಪಿಸಿ ಭಾವೈಕ್ಯ ಮೆರೆದ ಮುಸ್ಲಿಂ ಕುಟುಂಬ: ಮಗನ ಪ್ರೀತಿ, ಆಸೆಗೆ ಕಟ್ಟುಬಿದ್ದ ಪಾಲಕರು

Muslim Family
Published on

| ಮಲ್ಲು ಕಳಸಾಪುರ ಲಕ್ಷ್ಮೇಶ್ವರ

ದೇವರು, ಧರ್ಮದ ಹೆಸರಿನಲ್ಲಿ ಕೋಮುಭಾವನೆ ಕೆರಳಿಸಿ ಸಮಾಜದಲ್ಲಿ ಅಶಾಂತಿಗೆ ಕಾರಣರಾಗುವವರ ನಡುವೆ, ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ಮಗನ ಆಸೆ, ಪ್ರೀತಿಗೆ ಕಟ್ಟುಬಿದ್ದು ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಭಾವೈಕ್ಯ ಮೆರೆದಿದ್ದಾರೆ.

ಗದಗ ಜಿಲ್ಲೆ ಲಕ್ಷೆ್ಮೕಶ್ವರ ತಾಲೂಕಿನ ಸೂರಣಗಿ ಗ್ರಾಮದ ಮುಸ್ತಾಫ್ ಮಾಬುಸಾಬ್ ಕೋಲ್ಕಾರ ಗಣೇಶ ಚತುರ್ಥಿ ದಿನ ಹಿಂದು ಸಂಪ್ರದಾಯದಂತೆ ಗಣೇಶಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಮುಸ್ತಾಫ್ ಮತ್ತು ಯಾಸ್ಮಿನಾಬಾನು ದಂಪತಿಗೆ ಐವರು ಮಕ್ಕಳು. ಅವರ ಕೊನೆಯ ಮಗ 3 ವರ್ಷದ ಹಜರತ್ ಅಲಿಗೆ ಗಣೇಶ ದೇವರ ಮೂರ್ತಿಯೆಂದರೆ ಬಹಳ ಪ್ರೀತಿ. ತಾನು ಗಣೇಶ ಮೂರ್ತಿ ಮನೆಗೆ ತೆಗೆದುಕೊಂಡು ಹೋಗಬೇಕು, ಎಲ್ಲರಂತೆ ಪೂಜಿಸಬೇಕು, ಪಟಾಕಿ ಹೊಡೆಯಬೇಕು, ಕುಣಿದು ಕುಪ್ಪಳಿಸಬೇಕೆಂಬ ಹಂಬಲ. ಈ ಬಗ್ಗೆ ತಂದೆ-ತಾಯಿ ಹತ್ತಿರ ಕೇಳಿ ಅತ್ತು ಕರೆದು ಹಠ ಮಾಡಿದ್ದಾನೆ. ಹೆತ್ತವರು ಮಾತು ಮರೆಸಿದ್ದರು. ಆದರೆ, ಗಣೇಶ ಚತುರ್ಥಿ ದಿನ ಎಲ್ಲರೂ ಮನೆಗೆ ಗಣೇಶಮೂರ್ತಿ ತರುವುದನ್ನು ಗಮನಿಸಿದ ಹಜರತ್ ಅಲಿ ಅಣ್ಣನನ್ನು ಒಪ್ಪಿಸಿ ಮೂರ್ತಿ ಮಾರಾಟ ಮಾಡುವಲ್ಲಿಗೆ ಕರೆದುಕೊಂಡು ಹೋಗಿದ್ದಾನೆ. ಅಣ್ಣ-ತಮ್ಮ ಸೇರಿ ಗಣೇಶನ ಮೂರ್ತಿಯನ್ನು ಮನೆಗೆ ತಂದಿದ್ದಾರೆ. ಇದನ್ನು ಕಂಡ ತಂದೆ-ತಾಯಿ ಒಂದು ಕ್ಷಣ ಮೌನವಾಗಿದ್ದಾರೆ. ಬಳಿಕ ಶ್ರದ್ಧಾ ಭಕ್ತಿಯಿಂದ ಗಣೇಶನನ್ನು ಬರ ಮಾಡಿಕೊಂಡು ಹಿಂದು ಸಂಪ್ರದಾಯದಂತೆ ಪೂಜಿಸಿದ್ದಾರೆ. ಮುಸ್ತಾಫ್ ನಡೆಯನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.

ಮಕ್ಕಳು ದೇವರ ಸಮಾನ ಅಂತಾರೆ. ದೇವರೇ ಮನೆಗೆ ಬಂದಂತಾಗಿದ್ದು ಶ್ರದ್ಧೆ, ಭಕ್ತಿಯಿಂದ ಗಣೇಶ ಮೂರ್ತಿಯನ್ನು ಪೂಜಿಸುತ್ತೇವೆ. ಇನ್ನುಮುಂದೆ ಪ್ರತಿವರ್ಷ ನಮ್ಮ ಮನೆಯಲ್ಲಿ ಮೂರ್ತಿ ಪ್ರತಿಷ್ಠಾಪಿಸುತ್ತೇವೆ.

| ಮುಸ್ತಾಫ್ ಹಜರತ್ ಅಲಿ ತಂದೆ

ಗಣಪತಿ ಮೆರವಣಿಗೆ ವೇಳೆ ಮಾರಾಮಾರಿ

ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪ್​ನಲ್ಲಿ ಶನಿವಾರ ಸಂಜೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮೆರವಣಿಗೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಸಂಬಂಧಿಸಿ ಎರಡು ಕ್ಯಾಂಪ್​ಗಳ ನಡುವೆ ಮಾರಾಮಾರಿ ನಡೆದು, ಮೂವರು ಪೇದೆಗಳು ಸೇರಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 22 ಜನರನ್ನು ಬಂಧಿಸಿದ್ದು, ಇನ್ನೂ ಹಲವರು ತಲೆಮರೆಸಿಕೊಂಡಿದ್ದಾರೆ.

ಅರಬಿಳಚಿ ಕ್ಯಾಂಪ್ ಹಾಗೂ ನಟೇಶ್ ಕ್ಯಾಂಪ್​ನ ಗಣಪತಿ ಸಮಿತಿಯವರು ಒಂದೇ ಸಮಯದಲ್ಲಿ ಗಣೇಶ ಪ್ರತಿಷ್ಠಾಪನೆ ಮೆರವಣಿಗೆ ಆರಂಭಿಸಿದ್ದು, ಮೆರವಣಿಗೆಯಲ್ಲಿ ಡೊಳ್ಳು ಬಾರಿಸುತ್ತಿದ್ದ ಕಲಾವಿದನ ಮೇಲೆ ನಟೇಶ್ ಕ್ಯಾಂಪ್​ನ ಹುಡುಗ ಹಲ್ಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಡೊಳ್ಳು ಬಾರಿಸುವ ಹುಡುಗನ ರಕ್ಷಣೆಗೆ ಬಂದ ಅರಬಿಳಚಿ ಕ್ಯಾಂಪ್​ನ ಗುಂಪು ಮತ್ತು ನಟೇಶ್ ಕ್ಯಾಂಪ್ ಯುವಕರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಜಗಳ ಬಿಡಿಸಲು ಮುಂದಾದ ತಾಪಂ ಸದಸ್ಯ ಅಣ್ಣಾಮಲೈ ಅವರ ಮಗ ಅರ್ಜುನ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರಿಂದ ರೊಚ್ಚಿಗೆದ್ದ ಅರಬಿಳಚಿ ಕ್ಯಾಂಪ್ ಯುವಕರು ಪ್ರತಿಯಾಗಿ ಹಲ್ಲೆ ನಡೆಸಿದ್ದಾರೆ. ಸ್ವಲ್ಪ ಸಮಯದಲ್ಲೇ ಪರಿಸ್ಥಿತಿ ಕೈಮೀರಿ, ಕಲ್ಲು ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದಾರೆ. 112 ಪೊಲೀಸ್ ವಾಹನದಲ್ಲಿ ಬಂದ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ತಲೆ ಹಾಗೂ ಕಣ್ಣಿನ ಭಾಗಕ್ಕೆ ಹೊಡೆತ ಬಿದ್ದು ಪ್ರಜ್ಞಾಹೀನರಾಗಿದ್ದ ಪೇದೆ ನಾಗರಾಜ್ ಅವರನ್ನು ಕೆಲ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

120 ಜನರ ವಿರುದ್ಧ 3 ಪ್ರಕರಣ: ಕ್ಯಾಂಪ್​ನಲ್ಲಿ ಸ್ವಯಂಘೊಷಿತ ಬಂದ್ ವಾತಾವರಣ ನಿರ್ವಣವಾಗಿತ್ತು. ತೀವ್ರ ಗಾಯಗೊಂಡಿದ್ದ ಪೇದೆ ನಾಗರಾಜ್, ಸ್ಥಳೀಯ ಅರ್ಜುನ್ ಸೇರಿ ಗಾಯಾಳುಗಳನ್ನು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಲಭೆಗೆ ಸಂಬಂಧಿಸಿ ಹೊಳೆಹೊನ್ನೂರು ಪೊಲೀಸರು 120ಕ್ಕೂ ಹೆಚ್ಚು ಜನರ ವಿರುದ್ಧ 3 ಪ್ರಕರಣ ದಾಖಲಿಸಿದ್ದಾರೆ.

ಎಲೆಕ್ಟ್ರಿಷಿಯನ್ ಸಾವು: ಕಂಪ್ಲಿ ಪಟ್ಟಣದ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಬಳಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಟೆಂಟ್​ನಲ್ಲಿ ಅಲಂಕಾರಿಕ ವಿದ್ಯುತ್ ಬಲ್ಬ್​ಗಳಿಗೆ ವೈರ್ ಸಂಪರ್ಕ ಕಲ್ಪಿಸುವಾಗ ಶಾರ್ಟ್ ಸರ್ಕ್ಯೂಟ್ ಆಗಿ ಶನಿವಾರ ರಾತ್ರಿ ಎಲೆಕ್ಟ್ರಿಷಿಯನ್ ಮೃತಪಟ್ಟಿದ್ದಾರೆ. ಬೆಳಗೋಡ್​ಹಾಳ್ ಗ್ರಾಮದ ವರ್ದಿ ಹುಸೇನ್ ಬಾಷಾ (28) ಮೃತ. ಮೃತನ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net