

ಮೈಸೂರು: ಶ್ರೀಧರ್ ಜೈನ್ ಮತ್ತು ತಂಡದಿಂದ ನೃತ್ಯ ಪ್ರದರ್ಶನ… ರಾಜೇಶ್‌ಕೃಷ್ಣನ್ ಮತ್ತು ಜೋಗಿ ಸುನೀತಾ ತಂಡದಿಂದ ‘ಸಂಗೀತ ರಸಸಂಜೆ’… ವಿಜಯಪ್ರಕಾಶ್, ಅನುರಾಧಾ ಭಟ್ ಹಾಗೂ ಲಕ್ಷ್ಮೀನಾಗರಾಜ್ ಮತ್ತು ತಂಡದಿಂದ ‘ಸಂಗೀತ ಗಾನಾಮೃತ’…!
ಹೊಸ ವರ್ಷಾಚರಣೆಯ ಸಂಭ್ರಮ ಇಮ್ಮಡಿಗೊಳಿಸಲು ಮೈಸೂರು ಅರಮನೆ ಮಂಡಳಿ ವತಿಯಿಂದ ಡಿ.24 ರಿಂದ ಜ.2ರವರೆಗೆ ಅರಮನೆ ಆವರಣದಲ್ಲಿ ಅರಮನೆ ಫಲಪುಷ್ಪ ಪ್ರದರ್ಶನ-2022 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಡಿ.31ರವರೆಗೆ ಪ್ರತಿದಿನ ಸಂಜೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.
24ರಂದು ಸಂಜೆ 5 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಎಸ್.ಎ.ರಾಮದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದರಾದ ವಿ.ಶ್ರೀನಿವಾಸಪ್ರಸಾದ್, ಸುಮಲತಾ ಅಂಬರೀಷ್, ಪ್ರತಾಪ್ ಸಿಂಹ, ಮೇಯರ್ ಶಿವಕುಮಾರ್ ಇತರರು ಭಾಗವಹಿಸಲಿದ್ದಾರೆ.
24ರಂದು ಸಂಜೆ 6.30ಕ್ಕೆ ಯದುಕುಮಾರ್ ಅವರಿಂದ ವಾದ್ಯಗೋಷ್ಠಿ ಇರಲಿದೆ. ಸಂಜೆ 7.30ಕ್ಕೆ ಅಂತಾರಾಷ್ಟ್ರೀಯ ಕಲಾವಿದ ಶ್ರೀಧರ್ ಜೈನ್ ಮತ್ತು 500 ಕಲಾವಿದರ ತಂಡದಿಂದ ‘ಮೇರಾ ಭಾರತ್’ ನೃತ್ಯ ಪ್ರದರ್ಶನ ಇರಲಿದೆ.
25ರಂದು ಸಂಜೆ 6 ಗಂಟೆಗೆ ಗುರುದತ್ತ ನಾಗರಾಜ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ. 7 ಗಂಟೆಗೆ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಮತ್ತು ಜೋಗಿ ಸುನೀತಾ ತಂಡದಿಂದ ‘ಸಂಗೀತ ರಸಸಂಜೆ’ ಕಾರ್ಯಕ್ರಮ ನಡೆಯಲಿದೆ.
26ರಂದು ಸಂಜೆ 6 ಗಂಟೆಗೆ ಬಿ.ಎನ್.ಗಾಯತ್ರಿದೇವಿ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಲಿದ್ದಾರೆ. 7 ಗಂಟೆಗೆ ನಿತ್ಯ ನಿರಂತರ ಟ್ರಸ್ಟ್‌ನ ವಿಶೇಷ ಚೇತನ ಮಕ್ಕಳಿಂದ ನೃತ್ಯ ಪ್ರದರ್ಶನ ಇರಲಿದೆ. 7.30ಕ್ಕೆ ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್, ಅನುರಾಧಾ ಭಟ್ ಹಾಗೂ ಲಕ್ಷ್ಮೀನಾಗರಾಜ್ ಮತ್ತು ತಂಡದಿಂದ ‘ಸಂಗೀತ ಗಾನಾಮೃತ’ ಇರಲಿದೆ.
31ರಂದು ರಾತ್ರಿ 11 ಗಂಟೆಗೆ ಪೊಲೀಸ್ ಇಲಾಖೆಯಿಂದ ಕರ್ನಾಟಕ ಮತ್ತು ಆಂಗ್ಲ ಬ್ಯಾಂಡ್ ಕಾರ್ಯಕ್ರಮ ನಡೆಯಲಿದೆ. ರಾತ್ರಿ 12 ಗಂಟೆಗೆ ಹೊಸ ವರ್ಷಾಚರಣೆ ಪ್ರಯುಕ್ತ ಬಣ್ಣಗಳ ಚಿತ್ತಾರದಿಂದ ಕೂಡಿದ ಶಬ್ದರಹಿತ ಪಟಾಕಿ ಸಿಡಿಸುವ ಕಾರ್ಯಕ್ರಮ ನಡೆಯಲಿದೆ. ಫಲಪುಷ್ಪ ಪ್ರದರ್ಶನಕ್ಕೆ ಅರಮನೆ ಅಂಗಳದಲ್ಲಿ ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ. ಫಲಪುಷ್ಪ ಪ್ರದರ್ಶನ ಮುಗಿಯುವವರೆಗೂ ಸಂಜೆ 7 ರಿಂದ 9 ಗಂಟೆವರೆಗೆ ಅರಮನೆ ವಿದ್ಯುತ್ ದೀಪಾಲಂಕಾರವಿರುತ್ತದೆ.