

ಮೈಸೂರು: ‘ಇವ ನಮ್ಮವ, ಇವ ನಮ್ಮವ’ ಪರಿಕಲ್ಪನೆಯಡಿ ಆಯೋಜಿಸಿದ್ದ 6 ದಿನಗಳ ಕಾಲ ರಂಗಾಯಣದ ಅಂಗಳದಲ್ಲಿ ಆಯೋಜಿಸಿದ್ದ ಬಹುರೂಪಿ ನಾಟಕೋತ್ಸವ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ ತಿಳಿಸಿದರು.
ಈ ಬಾರಿಯ ಬಹುರೂಪಿ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ರಂಗಾಸಕ್ತರು ನಾಟಕಗಳು, ಜನಪದ ಉತ್ಸವ, ಚಲನಚಿತ್ರೋತ್ಸವ, ಕರಕುಶಲ ವಸ್ತುಪ್ರದರ್ಶನ ವೀಕ್ಷಣೆ ಮಾಡಿ ಸಂತಸಪಟ್ಟಿದ್ದಾರೆ. ಪ್ರತಿನಿತ್ಯ ಸಾವಿರಾರು ಜನರು ಬಹುರೂಪಿಗೆ ಭೇಟಿ ನೀಡಿ ನಾಟಕೋತ್ಸವ ಯಶಸ್ವಿಗೊಳಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
5.5 ಲಕ್ಷ ರೂ. ಸಂಗ್ರಹ: 6 ದಿನಗಳ ಕಾಲ ನಡೆದ ಬಹುರೂಪಿ ನಾಟಕೋತ್ಸವದಲ್ಲಿ ಉತ್ತರಪ್ರದೇಶ, ಮುಂಬೈ, ಕೊಲ್ಕತ್ತಾ, ಮಣಿಪುರ, ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳ 6 ನಾಟಕಗಳು, ಕನ್ನಡದ 10 ಮತ್ತು ತುಳು ಭಾಷೆಯ 1 ನಾಟಕ ಸೇರಿದಂತೆ ಒಟ್ಟು 17 ನಾಟಕಗಳು ಪ್ರದರ್ಶನಗೊಂಡವು. ಎಲ್ಲ ನಾಟಕಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಹೌಸ್‌ಫುಲ್ ಪ್ರದರ್ಶನ ಕಂಡಿವೆ. 17 ನಾಟಕಗಳಿಂದ 2800 ಟಿಕೆಟ್‌ಗಳು ಮಾರಾಟವಾಗಿದ್ದು, ಟಿಕೆಟ್‌ನಿಂದ 2.81 ಲಕ್ಷ ರೂ. ಆದಾಯ ಬಂದಿದೆ. ಕರಿಯದೇವರ ಹುಡುಕಿ, ಬೆರಳ್‌ಗೆ ಕೊರಳ್, ಮುಟ್ಟಿಸಿಕೊಂಡವನು ಸೇರಿದಂತೆ ಹಲವು ನಾಟಕಗಳಿಗೆ ಹೆಚ್ಚು ಬೇಡಿಕೆ ಇತ್ತು. ಟಿಕೆಟ್ ಮಾರಾಟ ಹಾಗೂ ಮಳಿಗೆಗಳಿಂದ ಒಟ್ಟು 5.5 ಲಕ್ಷ ರೂ. ಬಂದಿದ್ದು, ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಅವಧಿ, ಕಡಿಮೆ ನಾಟಕಗಳಿದ್ದರೂ ಹೆಚ್ಚು ಟಿಕೆಟ್ ಮಾರಾಟವಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ರಂಗಕರ್ಮಿ ಸಿ.ಬಸವಲಿಂಗಯ್ಯ, ಬಹುರೂಪಿ ಸಂಚಾಲಕ ಎಚ್.ಎಸ್.ಉಮೇಶ್ ಇದ್ದರು.
ಈ ಬಾರಿಯ ಬಹುರೂಪಿಗೆ 50 ಲಕ್ಷ ಬಜೆಟ್ ನಿಗದಿ ಮಾಡಲಾಗಿತ್ತು. 45 ಲಕ್ಷ ರೂ. ಒಳಗೆ ಖರ್ಚು ಮಾಡಬೇಕು ಎಂದು ಯೋಜನೆ ಹಾಕಿಕೊಂಡಿದ್ದೆವು. ಆದರೆ, 45.75 ಲಕ್ಷ ರೂ. ಖರ್ಚಾಗಿದೆ. ಹೊರರಾಜ್ಯದ ತಂಡಗಳಿಗೆ 55 ಸಾವಿರ ರೂ. ಸಂಭಾವನೆ ನೀಡಲಾಗಿದೆ. ದೂರದ ಊರುಗಳಿಂದ ಬಂದವರಿಗೆ, ಹೆಚ್ಚು ಕಲಾವಿದರಿದ್ದ ತಂಡಕ್ಕೆ ಮೂರು ಲಕ್ಷ ರೂ.ವರೆಗೂ ಸಂಭಾವನೆ ನೀಡಿದ್ದೇವೆ. ನಮ್ಮ ರಾಜ್ಯದವರಿಗೆ ಪ್ರಯಾಣ ಭತ್ಯೆ ಸೇರಿದಂತೆ 50-60 ಸಾವಿರ ರೂ. ನೀಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜಾನಪದ ಕಲಾತಂಡಗಳಿಗೆ ಸಂಭಾವನೆ ನೀಡಲಾಗಿದೆ ಎಂದು ನಿರ್ಮಲಾ ಮಠಪತಿ ತಿಳಿಸಿದರು.