

ಯಳಂದೂರು: ಪ್ರತಿ ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಿ ಆ ಮೂಲಕ ಬಡವರಿಗೆ, ಗ್ರಾಮೀಣರಿಗೆ ಉತ್ತಮ ಆರೋಗ್ಯ ಸೌಲಭ್ಯ ನೀಡಲು ನಮ್ಮ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಪಟ್ಟಣದ ಸರ್ಕಾರಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಯಳಂದೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯ 100 ಹಾಸಿಗೆಗಳ ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಉತ್ತಮ ಆರೋಗ್ಯ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇಲ್ಲಿಗೆ ಬರುವ ರೋಗಿಗಳನ್ನು ವೈದ್ಯರು ನಗುತ್ತ ಮಾತನಾಡಬೇಕು. ಆಗಲೇ ಅರ್ಧ ರೋಗಗಳು ನಿವಾರಣೆಯಾಗುತ್ತದೆ. ಅಲ್ಲದೆ ಯಾವುದೇ ಕಾರಣಕ್ಕೂ ಹಣಕ್ಕೆ ಬೇಡಿಕೆಯನ್ನು ಇಡಬಾರದು. ಈಗಿನ ಪೀಳಿಗೆಗೆ ರೋಗ ನಿರೋಧಕ ಶಕ್ತಿ ಕಡಿಮೆ ಇದೆ. ಸಾವಯವ ಆಹಾರ ಪದಾರ್ಥಗಳು ಕಡಿಮೆಯಾಗಿರುವುದೇ ಇದಕ್ಕೆ ಕಾರಣವಾಗಿದೆ ಎಂದರು.
ಕುಡಿತಕ್ಕೆ ದಾಸರಾಗಬೇಡಿ: ಕುಡಿತ ಒಂದು ಚಟವಾಗಿದೆ. ಇದನ್ನು ಬಿಡಬೇಕು. ಇದರಿಂದ ಆರೋಗ್ಯ ಹಾಳಾಗುತ್ತದೆ. ಇದನ್ನು ಬಿಟ್ಟರೆ ನಾವು ಕೂಡ ಮದ್ಯ ಮಾರಾಟವನ್ನು ನಿಲ್ಲಿಸುತ್ತೇವೆ. ಈ ಬಾರಿ ಅಬಕಾರಿ ಇಲಾಖೆಯಿಂದ ಸರ್ಕಾರಕ್ಕೆ 38,525 ಕೋಟಿ ರೂ. ಆದಾಯದ ನಿರೀಕ್ಷೆ ಇದೆ. ಇದು ಬರುತ್ತದೆ ಎಂಬ ನಂಬಿಕೆಯೂ ಇದೆ. ಏಕೆಂದರೆ ಕುಡಿಯುವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಕುಡಿಯುವುದನ್ನು ನಿಲ್ಲಿಸಿ ಎಂದು ಸಲಹೆ ನೀಡಿದರು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ ಮಾಡಿ ಎಂದು ಮುಖ್ಯಮಂತ್ರಿ ಸಲಹೆ ನೀಡಿದರು.
ಜನವರಿ, ಫೆಬ್ರುವರಿಯಲ್ಲಿ ಜಿಪಂ, ತಾಪಂ ಚುನಾವಣೆ?: 2025 ರ ಜನವರಿ ಅಥವಾ ಫೆಬ್ರುವರಿಯಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಯಲಿದೆ. ಆಗಲೂ ಸಹ ನೀವು ಈಗ ನೀಡುತ್ತಿರುವ ಬೆಂಬಲವನ್ನು ನಮಗೆ ನೀಡಬೇಕು. ನಾವು ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರವನ್ನು ಗೆದ್ದಿದ್ದೇವೆ. ಇದನ್ನು ಮತ್ತಷ್ಟು ಬಲಗೊಳಿಸುವ ಕೆಲಸವನ್ನು ಮಾಡಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ನೂರಾರು ಕೋಟಿ ರೂ. ಯೋಜನೆಗೆ ಬೇಡಿಕೆ ಇಟ್ಟಿದ್ದಾರೆ. ಅವರು ಜನಪರ ಕಾಳಜಿ ಹೊಂದಿದ್ದು ಕ್ಷೇತ್ರದ ಅಭಿವೃದ್ಧಿಗೆ ಅಪಾರ ಆಸಕ್ತಿ ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ಹಂತಹಂತವಾಗಿ ಈಡೇರಿಸುವುದಾಗಿ ಭರವಸೆ ನೀಡಿದರು.
ಬಿಳಿಗಿರಿರಂಗನಬೆಟ್ಟದಲ್ಲಿ ಮಿನಿ ಸಚಿವ ಸಂಪುಟ ನಡೆಸಿ: ಮಲೆಮಹದೇಶ್ವರ ಬೆಟ್ಟದಂತೆ ಬಿಳಿಗಿರಿರಂಗನಬೆಟ್ಟದಲ್ಲೂ ಮುಂದಿನ ದಿನಗಳಲ್ಲಿ ಮಿನಿ ಸಚಿವ ಸಂಪುಟ ಸಭೆಯನ್ನು ನಡೆಸಿ, ಒಂದು ಪೈಲೆಟ್ ಪ್ರಾಜೆಕ್ಟ್ ಮಾಡಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿ, ಪಟ್ಟಣಕ್ಕೆ ಒಳಚರಂಡಿ ಮಾಡಲು ಅನುದಾನವನ್ನು ನೀಡಿ ಎಂದು ಮುಖ್ಯಮಂತ್ರಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಮನವಿ ಸಲ್ಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶ್‌ಪ್ರಸಾದ್, ಮಂಜುನಾಥ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಅಸ್ಗರ್, ಪಪಂ ಅಧ್ಯಕ್ಷೆ ಲಕ್ಷ್ಮೀ ಮಲ್ಲು, ಉಪಾಧ್ಯಕ್ಷೆ ಶಾಂತಮ್ಮ ನಿಂಗರಾಜು, ಸದಸ್ಯ ಮಹೇಶ್, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಪಂ ಸಿಇಒ ಮೋನಾರೋತ್ ಎಸ್‌ಪಿ ಬಿ.ಟಿ.ಕವಿತಾ, ಆರೋಗ್ಯ ಇಲಾಖೆಯ ಆಯುಕ್ತ ಶಿವಕುಮಾರ್, ಡಿಎಚ್‌ಒ ಚಿದಂಬರಂ, ತಾಲೂಕು ವೈದ್ಯಾಧಿಕಾರಿ ಡಾ.ಶ್ರೀಧರ್, ತಾಲೂಕು ಆರೋಗ್ಯಾಧಿಕಾರಿ ಡಾ.ತನುಜಾ, ಡಾ.ನಾಗೇಂದ್ರಮೂರ್ತಿ, ಡಾ.ನಾಗೇಶ್, ಡಾ.ಶಶಿರೇಖಾ ಸೇರಿದಂತೆ ಅನೇಕರು ಇದ್ದರು.