

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೋಟ್ಯಂತರ ರೂಪಾಯಿ ಹಗರಣ ಆಗಿದೆ ಎಂದು ಆರೋಪಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮುಡಾ ಕಚೇರಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೋಟ್ಯಂತರ ರೂಪಾಯಿ ಹಗರಣ ಮಾಡಿರುವ ಮುಡಾ ಆಯುಕ್ತರನ್ನು ಕೂಡಲೇ ಬಂಧಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸುಮಾರು ಐದು ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ಹಂಚಿ, ಮೈಸೂರಿನ ಇತಿಹಾಸದಲ್ಲಿಯೇ ಭಾರೀ ಪ್ರಮಾಣದ ಭೂ ದರೋಡೆ ಮಾಡಿರುವುದು ಖಂಡನೀಯ. ಬದಲಿ ನಿವೇಶನ ನೀಡದಂತೆ ಎರಡು ವರ್ಷದ ಹಿಂದೆಯೇ ಸರ್ಕಾರ ಆದೇಶ ಮಾಡಿ, ಅತಿ ಅಗತ್ಯ ಬಿದ್ದರೆ ಮಾತ್ರ ಸರ್ಕಾರದ ಅನುಮತಿ ಪಡೆದು ಹಂಚಿಕೆಗೆ ತಾಕೀತು ಮಾಡಿದ್ದರೂ ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ನಿಯಮ ಬಾಹಿರವಾಗಿ ಬದಲಿ ನಿವೇಶನ ಹಂಚಿಕೆ ಮಾಡಿದ್ದಾರೆ. ಇದರಿಂದ ಸುಮಾರು 3 ಸಾವಿರ ಕೋಟಿ ಹಗರಣ ಮಾಡಿ, ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟ ಮಾಡಿರುವುದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದರು.