

ಮೈಸೂರು: ಮಹಿಳಾ ಹಕ್ಕುಗಳ ರಕ್ಷಣೆಗೆ ಚಳವಳಿ ಕೈಗೊಳ್ಳುವುದು ಈಗಿನ ತುರ್ತು ಅನಿವಾರ್ಯವಾಗಿದೆ ಎಂದು ಜೆಎಸ್‌ಎಸ್ ಆಯುರ್ವೇದ ಕಾಲೇಜಿನ ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ.ವಿದ್ಯಾ ನಾರಾಯಣ್ ಹೇಳಿದರು.
ಐಕ್ಯೂಎಸಿ ಹಾಗೂ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕೋಶದ ಸಹಯೋಗದಲ್ಲಿ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಿನ ಆಧುನಿಕ ಕಾಲದಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ. ಬದಲಿಗೆ ನಿರಂತರವಾಗಿ ನಡೆಯುತ್ತಿದೆ. ಇದು ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಹೆಚ್ಚು. ಇಲ್ಲಿ ನಡೆಯುವ ಪ್ರಕರಣಗಳಲ್ಲಿ ಶೇ.50ರಷ್ಟು ದೂರು ದಾಖಲಾಗುವುದಿಲ್ಲ. ಕಿರುಕುಳ ಪ್ರಕರಣಗಳಲ್ಲಿ ಶೇ.80ರಷ್ಟು ಸಂತ್ರಸ್ತೆಯರು ಬಡವರು. ಆದ್ದರಿಂದ ಮಹಿಳಾ ಕಷ್ಟದ ದಿನಗಳಿಗೆ ಕೊನೇ ಇಲ್ಲದಂತಾಗಿದ್ದು, ಇದಕ್ಕೆ ಹೋರಾಟವೊಂದೇ ದಾರಿ ಎಂದರು.
ಕೆಲಸ ಮಾಡುವ ಸ್ಥಳದಲ್ಲೂ ಮಹಿಳೆಯರು ಸುರಕ್ಷಿತವಲ್ಲ. ಅಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿವೆ. ಅದನ್ನು ಮಹಿಳೆಯರು ಧೈರ್ಯವಾಗಿ ಪ್ರಶ್ನಿಸಿ ದೂರು ದಾಖಲಿಸಬೇಕು. ದೂರು ನೀಡದೇ ಇದ್ದರೆ ಆರೋಪಿಯನ್ನು ಬೆಂಬಲಿಸಿದಂತಾಗುತ್ತದೆ. ದೌರ್ಜನ್ಯ ಮುಂದುವರಿಯಲೂ ಕಾರಣವಾಗುತ್ತದೆ. ಜತೆಗೆ, ಹೀಗೆ ಮಾಡಿದರೆ ಸಂತ್ರಸ್ತೆಯರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಇದರಿಂದಾಗಿ ಉದ್ಯೋಗ ಸ್ನೇಹಿ ವಾತಾವರಣ ನಿರ್ಮಾಣವೂ ಕಷ್ಟಕರವಾಗಲಿದೆ. ಮಹಿಳಾ ಸಬಲೀಕರಣವೂ ಸಾಧ್ಯವಾಗುವುದಿಲ್ಲ ಎಂದರು.
ಪ್ರಸೂತಿ, ಸ್ತ್ರೀರೋಗ ವೈದ್ಯೆ ಡಾ.ಕೆ.ಒ.ನಂದಾ, ಪ್ರಾಂಶುಪಾಲೆ ಎಂ.ಪೂರ್ಣಿಮಾ, ಶೈಕ್ಷಣಿಕ ಡೀನ್ ರೇಚಣ್ಣ ಇದ್ದರು.