ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ಪ್ರೇರಣಾತ್ಮಕ ಕಾರ್ಯಕ್ರಮ

ojashwi
Published on

ಮಡಿಕೇರಿ: ಗೋಣಿಕೊಪ್ಪಲಿನ ಓಜಸ್ವಿ ಫೌಂಡೇಶನ್ ವತಿಯಿಂದ ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಚೈತನ್ಯ ಪಥ ಮತ್ತು ಯಶಸ್ಸಿನ ಸೂತ್ರ ಶೀರ್ಷಿಕೆಯಡಿ ಎರಡು ಪ್ರೇರಣಾತ್ಮಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಕಾರ್ಯಕ್ರಮಗಳಿಗೆ ಓಜಸ್ವಿ ಫೌಂಡೇಶನ್‌ನ ಟ್ರಸ್ಟಿಗಳಾದ ಡಾ.ಪಿ.ಸಿ.ಕವಿತಾ ಮತ್ತು ಬೆಂಗಳೂರಿನ ಜಸ್ಟ್ರೊಬೊಟಿಕ್ಸ್‌ನ ಸಿಇಒ ಬ್ರಿಜೇಶ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಓಜಸ್ವಿ ಫೌಂಡೇಶನ್‌ನ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪಿಯುಸಿ ವಿದ್ಯಾರ್ಥಿಗಳಿಗೆ ಗುರಿ ಸಾಧನೆಗೆ ಅಗತ್ಯವಿರುವ ಮನೋಬಲ, ಸಮಯ ನಿರ್ವಹಣೆ ಮತ್ತು ಸಕಾರಾತ್ಮಕ ದೃಷ್ಟಿಕೋನದ ಬಗ್ಗೆ ಮುಕ್ತ ಸಂಭಾಷಣೆ ನಡೆಸಲಾಯಿತು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉದ್ದೇಶಪೂರ್ವಕ ಬದುಕು ಮತ್ತು ಆನಂದ ಎಂಬ ವಿಷಯದ ಕುರಿತು ಪ್ರೇರಣಾತ್ಮಕ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಗುರಿಯ ಮಹತ್ವ, ಶಿಸ್ತಿನ ಅವಶ್ಯಕತೆ ಹಾಗೂ ಜೀವನದಲ್ಲಿ ಧ್ಯೇಯದೊಂದಿಗೆ ಸಾಗುವ ಕುರಿತು ಸವಿವರವಾಗಿ ತಿಳಿಸಲಾಯಿತು. ಸಂವಾದದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಪಾರ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೆ ಭಾರತೀಯ ವಾಯುಪಡೆಯ ನಿವೃತ್ತ ವಿಂಗ್ ಕಮಾಂಡರ್ ಹಾಗೂ ಬೆಂಗಳೂರು ಕೊಡಗು ಗೌಡ ಸಮಾಜ ಉಪಾಧ್ಯಕ್ಷ ಅಯ್ಯಟಿರ ಮನೋಜ್ ಅವರು ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಸಂದೇಶ ನೀಡಿದರು. ವಿದ್ಯಾರ್ಥಿಗಳ ಗುರಿ ನಿರ್ಣಯ, ಸಾಧನೆ ಮತ್ತು ಶಿಸ್ತಿನ ಮಹತ್ವವನ್ನು ಅವರು ಮನವರಿಕೆ ಮಾಡಿಕೊಟ್ಟರು.

ಪಿಯುಸಿ ಪ್ರಾಂಶುಪಾಲ ಪಿ.ಎಂ.ದೇವಕ್ಕಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ಇಂತಹ ಕಾರ್ಯಕ್ರಮದ ಸಹಕಾರಿಯಾಗಲಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಎ.ಎಸ್.ರಶ್ಮಿ, ಉಪನ್ಯಾಸಕರು ಮತ್ತು ಶಿಕ್ಷಕರು, ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net