

ಹಾನಗಲ್ಲ: ಬಡತನಕ್ಕೆ ಬೇಸತ್ತ ತಾಯಿ, ತನ್ನ ಕರುಳ ಕುಡಿಯಾದರೂ ಚೆನ್ನಾಗಿರಲಿ ಎಂದು ಬಯಸಿ ಯಾರಿಗೂ ಗೊತ್ತಾಗದಂತೆ 10 ತಿಂಗಳ ಮಗುವನ್ನು ದಾಬಾ ಬಳಿ ಬಿಟ್ಟು ಹೋಗಿದ್ದಳು. ಆದರೆ, ಹೆತ್ತೊಡಲಿಗೆ ಕರುಳ ಕುಡಿಯನ್ನು ಒಂದು ದಿನವೂ ಬಿಟ್ಟಿರಲು ಸಾಧ್ಯವಾಗದೇ ಚಡಪಡಿಸುತ್ತ ಮರು ದಿನ ದಾಬಾ ಬಳಿಗೆ ಓಡೋಡಿ ಬಂದು ಮಗನಿಗಾಗಿ ಹುಡುಕಾಡಿದ ಘಟನೆ ಬುಧವಾರ ನಡೆದಿದೆ.
ತಾಯಿಯ ಅದೃಷ್ಟ ಚನ್ನಾಗಿದೆ. ಪೊಲೀಸರು ಮತ್ತು ಸಿಡಿಪಿಒ ಕೈಗೊಂಡ ಮುಂಜಾಗ್ರತೆ ಕ್ರಮದಿಂದಾಗಿ ಮಗು ಮರಳಿ ತಾಯಿ ಮಡಿಲು ಸೇರಿದೆ. ಇದು ನಡೆದಿದ್ದು, ತಾಲೂಕಿನ ನಾಲ್ಕರ ಕ್ರಾಸ್ ಬಳಿಯ ಗರಂ ಮಸಾಲಾ ದಾಬಾದಲ್ಲಿ.
ಘಟನೆ ಹಿನ್ನೆಲೆ: ದಾಬಾ ಬಳಿ ಯಾರೋ 10 ತಿಂಗಳ ಮಗುವನ್ನು ಬಿಟ್ಟು ಹೋಗಿದ್ದಾರೆ ಎಂದು ಮಂಗಳವಾರ ಮಧ್ಯಾಹ್ನ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಗೆ ಕರೆ ಮಾಡಿದ್ದರು. ಹಾನಗಲ್ಲ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ಹಾಗೂ ಸಿಡಿಪಿಒ ಸಂತೋಷಕುಮಾರ ಅವರ ತಂಡ ಕೂಡಲೆ ಸ್ಥಳಕ್ಕೆ ಭೇಟಿ ನೀಡಿ, ಮಗುವನ್ನು ಹಾವೇರಿಯ ಮಕ್ಕಳ ರಕ್ಷಣಾ ಕೇಂದ್ರದ ಸುಪರ್ದಿಗೆ ಒಪ್ಪಿಸಿದ್ದರು. ಮರುದಿನವೇ ಮಗುವಿನ ತಾಯಿ, ಸೊರಬ ತಾಲೂಕಿನ ತಲ್ಲೂರ ಗ್ರಾಮ ರೇಖಾ ಎಂಬುವವರು ಮಗುವನ್ನು ಹುಡುಕಿಕೊಂಡು ಬಂದಿದ್ದಳು.
‘ರೇಖಾಳದು ಬಡ ಕುಟುಂಬ. ಮೂವರು ಸಹೋದರಿಯರಲ್ಲಿ ಈಕೆ ಮೂರನೆಯವಳು. ಎರಡು ವರ್ಷಗಳ ಹಿಂದೆ ಶಿರಸಿ ತಾಲೂಕಿನ ಸೋಮನಾಳ ಗ್ರಾಮದ ಪ್ರಕಾಶ ಎಂಬಾತನೊಂದಿಗೆ ಮದುವೆಯಾಗಿತ್ತು. ಗಂಡನ ಮನೆಯಲ್ಲಿಯೂ ಬಡತನ. ಹೀಗಾಗಿ ಮಗನಾದರೂ ಚೆನ್ನಾಗಿರಲಿ ಎಂದು ಮಂಗಳವಾರ ಮನೆಯಲ್ಲಿ ಯಾರಿಗೂ ತಿಳಿಸದೆ ದಾಬಾ ಬಳಿ ಬಿಟ್ಟು ಬಂದಿದ್ದಳು. ತಪ್ಪಿನ ಅರಿವಾಗಿ ಮಗುವನ್ನು ಹುಡುಕಿಕೊಂಡು ದಾಬಾ ಬಳಿ ಬಂದಿದ್ದಳು. ವಿಚಾರಣೆ ನಡೆಸಿ ಮುಚ್ಚಳಿಕೆ ಬರೆಯಿಸಿಕೊಂಡು ಮಗುವನ್ನು ತಾಯಿಗೆ ಒಪ್ಪಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.