

ಸಿ.ಎಸ್.ವಿಶ್ವನಾಥ ಶಾಸ್ತ್ರಿ ರಾಯಲ್ಪಾಡು: ರಾಜ್ಯದ ಮಾವು ಮತ್ತು ಟೊಮ್ಯಾಟೊ ಬೆಳೆಗೆ ಖ್ಯಾತಿ ಪಡೆದಿರುವ ಕೋಲಾರ ಜಿಲ್ಲೆಯಲ್ಲಿ ಮಾವು ಬೆಳೆಗಾರರಿಗೆ ಬೆಳೆ ನಿರಾಸೆ ಮೂಡಿಸಿದೆ. ಆರಂಭದಲ್ಲಿ ಹೂವಿನ ಮಲು ನೋಡಿ ಅಂದಾಜಿಸಿದಷ್ಟು ಕಾಯಿ ಬರದಿರುವುದು ಬೇಸರ ಮೂಡಿಸಿದೆ.
ಜಿಲ್ಲೆಯ ಶ್ರೀನಿವಾಸಪುರ ಭಾಗದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು, ಕಳೆದ 10 ವರ್ಷದಿಂದ ಪ್ರಕೃತಿ ವಿಕೋಪ ಮತ್ತು ಇತರ ಕಾರಣಗಳಿಗಾಗಿ ಬೆಳೆಗಾರರಿಗೆ ನಷ್ಟವಾಗುತ್ತಿದೆ. ಈ ಬಾರಿ ಹೂವಿಗೂ, ಈಗ ಬಿಟ್ಟಿರುವ ಕಾಯಿಗೂ ಅಜಗಜಾಂತರ ವ್ಯತ್ಯಾಸವಾಗಿದ್ದು, ಇತ್ತೀಚೆಗೆ ಸುರಿದ ಮಳೆಗೆ ಬೆಳೆ ಕಮರಿದೆ.
ತೀವ್ರ ಗಾಳಿ ಮತ್ತು ಅಕಾಲಿಕ ಮಳೆಯಿಂದಾಗಿ ಹೂವು ಉದುರಿ ಇಳುವರಿ ತೀವ್ರ ಹಿಂಜರಿದಿದೆ. ಮಾವು ಬೆಳೆಗಾರರ ಪ್ರಕಾರ, ಈ ವರ್ಷ ಇಷ್ಟಕ್ಕೆ ಮಳೆ ನಿಂತರೆ ಔಷಧೋಪಚಾರ ಮಾಡಿಯೂ ಕೇವಲ ಶೇ.30 ಇಳುವರಿ ಸಿಗಲಿದೆ ಎಂದು ಅಂದಾಜಿಸಲಾಗಿದೆ.
ತಾಲೂಕಿನಲ್ಲಿ ಬೆಳೆಯುವ ಮಾವು ತಳಿಗಳಾದ ಬಾದಾಮಿ, ರಾಜಗೀರಾ, ಬೇನಿಷಾ, ನೀಲಂ, ತೋತಾಪುರಿ, ಸೇಂದೂರಾ/ರಸಪೂರಿ ಸೇರಿ ಹಲವು ಹಣ್ಣುಗಳು ವಿದೇಶಗಳಿಗೆ ರಫ್ತಾಗುತ್ತಿವೆೆ. ಮಾಮರದಲ್ಲಿ ಎಲೆಗಳೇ ಕಾಣದ ರೀತಿಯಲ್ಲಿ ಹೂವು ಬಿಟ್ಟಿರುವ ಕಾರಣ ಮಾವು ಬೆಳೆಗಾರರ ನಿರೀಕ್ಷೆಯೂ ಹೆಚ್ಚಾಗಿತ್ತು. ಕಳೆದ ವರ್ಷ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಬಿದ್ದ ಮಳೆಯಿಂದ ಭೂಮಿ ತಂಪಾಗಿದೆ. ಮಾವಿನ ಮರಗಳು ಫಲವತ್ತತೆ ಕಂಡಿರುವ ಹಿನ್ನೆಲೆಯಲ್ಲಿ ಸೊಂಪಾಗಿ ಮೈತುಂಬ ಹೂವು ಮುಡಿದು ನಿಂತಿದ್ದವು. ವರ್ಷಕ್ಕೆ ಒಂದೇ ಬೆಳೆಯಾದರೂ ರೈತಾಪಿ ಕುಟುಂಬಗಳಿಗೆ ಬದುಕು ಕಟ್ಟಿಕೊಡುವಂತೆ ಮಾವುಬೆಳೆ ಇಲ್ಲಿನ ಮಾವು ಬೆಳೆಗಾರನಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸಿದರೂ ಪ್ರಕೃತಿ ಯಾಕೋ ನಿರಾಸೆ ಹುಟ್ಟಿಸಿದೆ.
ಎದುರಾದ ಆತಂಕ: ರಾಜ್ಯದ ಮಾವು ತೋಟಗಳ ಹೃದಯಭಾಗವಾಗಿರುವ ಶ್ರೀನಿವಾಸಪುರದಲ್ಲಿ ಈ ವರ್ಷ ಮಾವು ಸುಗ್ಗಿಗೆ ಇನ್ನೂ ಕೇವಲ ಒಂದು ತಿಂಗಳು ಬಾಕಿಯಿದ್ದು, ಇಳುವರಿ ಹಾಗೂ ಮಾರಾಟದ ಬಗ್ಗೆ ರೈತರು ಮತ್ತು ವ್ಯಾಪಾರಸ್ಥರಲ್ಲಿ ಆತಂಕ ಮನೆಮಾಡಿದೆ. ಶ್ರೀನಿವಾಸಪುರ ತಾಲೂಕಿನಲ್ಲಿ 59 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ತೋಟಗಳು ಹರಡಿದ್ದು, ಇದು ಈ ಭಾಗದ ಮುಖ್ಯ ಕೃಷಿ ಆಧಾರಿತ ಆರ್ಥಿಕತೆಯ ಭಾಗವಾಗಿದೆ. ಟೊಮ್ಯಾಟೊ ಸೇರಿ ಇತರ ತರಕಾರಿಗಳೊಂದಿಗೆ ಮಾವು ಕೂಡ ಪ್ರಮುಖ ಹಣಕಾಸು ಆದಾಯದ ಮೂಲವಾಗಿದೆ.
ಪೈಪೋಟಿ: ಸಾಮಾನ್ಯವಾಗಿ ಮೇ 15ರಿಂದ ಆರಂಭವಾಗುವ ಮಾವಿನ ಮಾರುಕಟ್ಟೆ ಚಟುವಟಿಕೆಗಳು ಹಲವು ತಿಂಗಳಗಳ ಕಾಲ ನಡೆದರೆ, ಈ ಬಾರಿ ಕಡಿಮೆ ಇಳುವರಿಯ ಪರಿಣಾಮ ಮಾರುಕಟ್ಟೆ ಚಟುವಟಿಕೆಗಳು ಕೇವಲ ಎರಡು ತಿಂಗಳಿಗೆ ಸೀಮಿತವಾಗಬಹುದು ಎಂದು ಅಂದಾಜಿಸಲಾಗಿದೆ. ಇನ್ನೊಂದು ಕಡೆ ನಿರೀತ ಬೆಲೆ ಸಿಗುವುದು ಕಷ್ಟ ಎನ್ನಲಾಗುತ್ತಿದೆ. ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ಸೇರಿ ಇತರ ರಾಜ್ಯಗಳಿಂದಲೂ ಈ ಅವಧಿಯಲ್ಲಿ ಮಾವು ಮಾರುಕಟ್ಟೆಗೆ ಬರಲಿರುವುದರಿಂದ ಪೈಪೋಟಿ ಉಂಟಾಗಲಿದೆ. ಇದರ ಪರಿಣಾಮವಾಗಿ ಶ್ರೀನಿವಾಸಪುರದ ಮಾವಿಗೆ ಉತ್ತಮ ಬೆಲೆ ಸಿಗುವ ಸಾಧ್ಯತೆ ಕಡಿಮೆಯಾಗಿರುವುದಾಗಿ ವ್ಯಾಪಾರ ವಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಲಾಭವೋ, ನಷ್ಟವೋ?
ಬೆಳೆಗಾರರು ಔಷಧ ಸಿಂಪಡಣೆ ಸೇರಿ ಹಲವು ಪ್ರಯತ್ನ ನಡೆಸಿದ್ದು, ಈಗಾಗಲೇ ಲಾಂತರ ರೂಪಾಯಿ ಖರ್ಚು ಮಾಡಿಕೊಂಡಿದ್ದಾರೆ. ಇತ್ತ, ಮೌಲ್ಯಯುತ ಮಾವು ಪಡೆಯುವ ನಿಟ್ಟಿನಲ್ಲಿ ವ್ಯಾಪಾರಸ್ಥರು ತೋಟಗಳಿಗೆ ಭೇಟಿ ನೀಡುತ್ತಿದ್ದಾರೆ. ಸುಗ್ಗಿ ಆರಂಭದ ಬಳಿಕವೇ ನಿಜವಾದ ಸ್ಥಿತಿ ತಿಳಿಯಲಿದ್ದು, ಮಾರುಕಟ್ಟೆ ಲಾಭದಾಯಕವಾಗುತ್ತದೆಯೋ ಅಥವಾ ಮತ್ತಷ್ಟು ನಷ್ಟ ತರುವುದೋ ಎಂಬುದನ್ನು ಕಾಲವೇ ನಿರ್ಧರಿಸಲಿದೆ.