

ಮೈಸೂರು: ಅಪರಿಚಿತ ಮಹಿಳೆಯೊಬ್ಬರು 9 ತಿಂಗಳ ಹೆಣ್ಣು ಮಗುವನ್ನು ಬಸ್ ನಿಲ್ದಾಣದಲ್ಲಿ ಯುವಕನಿಗೆ ನೀಡಿ ನಾಪತ್ತೆಯಾಗಿರುವ ಅಮಾನವೀಯ ಪ್ರಕರಣ ರಾಯಚೂರಿನಲ್ಲಿ ನಡೆದಿದ್ದು, ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆಯ ನಿವಾಸಿ ರಘು ಎಂಬುವರು ಕೆಲಸದ ನಿಮಿತ್ತ ರಾಯಚೂರಿಗೆ ತೆರಳಿದ್ದರು. ರಾಯಚೂರಿನಿಂದ ಮೈಸೂರಿಗೆ ಹಿಂದಿರುಗಲು ಭಾನುವಾರ ಮಧ್ಯಾಹ್ನ ಬಸ್ ನಿಲ್ದಾಣದಲ್ಲಿದ್ದರು. ಈ ವೇಳೆ ಮಹಿಳೆಯೊಬ್ಬಳು ರಘು ಬಳಿ ಬಂದು ಶೌಚಗೃಹಕ್ಕೆ ಹೋಗಿ ಬರುವೆ. 5 ನಿಮಿಷ ಮಗುವನ್ನು ಕೂರಿಸಿಕೊಳ್ಳಿ ವಾಪಸ್ ಬರುವೆ ಎಂದೇಳಿ ಮಗುವನ್ನು ಕೊಟ್ಟು ಹೋಗಿದ್ದಾಳೆ. ಆದರೆ, ಸುಮಾರು ಹೊತ್ತಾದರೂ ಆ ಮಹಿಳೆ ಹಿಂದಿರುಗದ ಕಾರಣ ರಘು ಇಡೀ ಬಸ್ ನಿಲ್ದಾಣದಲ್ಲಿ ಹುಡುಕಾಡಿದ್ದಾರೆ.
ಬಳಿಕ ಬಸ್ ಹೊರಡಲು ಸಿದ್ಧವಾಗಿದ್ದರಿಂದ ಮಗುವನ್ನು ತಮ್ಮ ಜತೆಯೇ ಮೈಸೂರಿಗೆ ಕರೆತಂದಿದ್ದಾರೆ. ಮೈಸೂರಿನಲ್ಲಿ ಸೋಮವಾರ ಬೆಳಗ್ಗೆ ಬಸ್ ಇಳಿಯುತ್ತಿದ್ದಂತೆ ನೇರ ಲಷ್ಕರ್ ಪೊಲೀಸ್ ಠಾಣೆಗೆ ಹೋಗಿ ಮಗುವನ್ನು ಒಪ್ಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲಷ್ಕರ್ ಪೊಲೀಸರು ಮಗುವನ್ನು ರಕ್ಷಿಸಿ, ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ನಂತರ ಮಗುವನ್ನು ಸರ್ಕಾರಿ ಬಾಲ ಮಂದಿರಕ್ಕೆ ಒಪ್ಪಿಸಿದ್ದಾರೆ.