ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲೂ ಬಾಣಂತಿ ಸಾವು

Mcggan hospital
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ
Published on

ಶಿವಮೊಗ್ಗ: ರಾಜ್ಯದ ವಿವಿಧೆಡೆ ಬಾಣಂತಿಯರ ಸಾವಿನ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಬಾಣಂತಿ ಮೃತಪಟ್ಟಿದ್ದಾರೆ.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಶಂಶೀಪುರದ ಕವಿತಾ(24) ಮೃತ ದುರ್ದೈವಿ. ಭದ್ರಾವತಿ ತಾಲೂಕಿನ ಮೈದೊಳಲು-ಮಲ್ಲಾಪುರ ಗ್ರಾಮದ ತವರು ಮನೆಯಲ್ಲಿದ್ದ ಕವಿತಾ ಎರಡನೇ ಹೆರಿಗೆಗಾಗಿ ಜ.1ರಂದು ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ವಾರ್ಡ್‌ಗೆ ದಾಖಲಾಗಿದ್ದರು.

ಕವಿತಾ ಆಸ್ಪತ್ರೆಗೆ ದಾಖಲಾದ ವೇಳೆ ಹಾಗೂ ಹೆರಿಗೆಪೂರ್ವದ ತಪಾಸಣೆ ವೇಳೆಯಲ್ಲಿ ಅವರ ಬಿಪಿ, ಪಲ್ಸ್, ರಕ್ತಕ್ಕೆ ಸಂಬಂಧಿಸಿದ ಹಿಮೋಗ್ಲೋಬಿನ್, ಬಿಳಿ ರಕ್ತಕಣ, ಅಲ್ಟ್ರಾಸೌಂಡ್ ಮತ್ತಿತರ ಪರೀಕ್ಷೆಗಳು ನಾರ್ಮಲ್ ಆಗಿತ್ತು. ಆರೋಗ್ಯವಾಗಿಯೇ ಇದ್ದರು. ಆದರೆ ದಿಢೀರನೆ ತೀವ್ರ ಸ್ವರೂಪದ ರಕ್ತಸ್ರಾವ ಸಮಸ್ಯೆ ಕಾಣಿಸಿಕೊಂಡ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ತಿಮ್ಮಪ್ಪ, ಶುಕ್ರವಾರ ಬೆಳಗ್ಗೆ ಕವಿತಾ ಅವರಿಗೆ ಸಹಜ ಹೆರಿಗೆಯಾಗಿತ್ತು. 3.5 ಕೆಜಿ ತೂಕದ ಹೆಣ್ಣು ಮಗು ಜನಿಸಿತ್ತು. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದರು. ತದನಂತರ ವಾರ್ಡ್‌ಗೆ ಶಿಫ್ಟ್ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.

ಹೆರಿಗೆಯಾದ ಎರಡು ಗಂಟೆ ನಂತರ ದಿಢೀರ್ ಆಗಿ ಅವರಲ್ಲಿ ತೀವ್ರ ಸ್ವರೂಪದ ರಕ್ತಸ್ರಾವ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣ ಅವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಅವರಿಗೆ ಹೃದಯಾಘಾತವಾಗಿತ್ತು. ಸಾಕಷ್ಟು ವೈದ್ಯೋಪಚಾರದ ನಡುವೆಯೂ ಅವರು ಬದುಕುಳಿಯಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net