

ಮುಧೋಳ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅರಾಜಕತೆ ಮಿತಿ ಮೀರಿದೆ. ಸರ್ಕಾರ ವಕ್ಫ್ ಜೊತೆ ಸೇರಿಕೊಂಡು ರೈತರ, ಮಠಮಾನ್ಯಗಳ, ಹಿಂದುಗಳ ಜಮೀನನ್ನು ಕಬಳಿಸುವ ಹುನ್ನಾರ ನಡೆಸಿದೆ ಎಂದು ಬಿಜೆಪಿ ಯುವ ನಾಯಕ ಅರುಣ ಕಾರಜೋಳ ಹೇಳಿದರು.
ಮಂಗಳವಾರ ವಕ್ಫ್ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ವಾಲ್ಮೀಕಿ ಹಗರಣ, ಮುಡಾ ಹಗರಣ ನಂತರ ವಕ್ಫ್ ವಿವಾದ ಆರಂಭಿಸಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಗೆ ಅನುದಾನ ಕೊಡದಷ್ಟು ದಿವಾಳಿಯಾಗಿದೆ. ಮುಸ್ಲಿಂ ತುಷ್ಟೀಕರಣಕ್ಕಾಗಿ ರೈತರ ಜಮೀನು ಕಬಳಿಕೆಗೆ ಮುಂದಾಗಿರುವುದು ಅಕ್ಷಮ್ಯ. ವಕ್ಫ್ ಕಾಯಿದೆಯನ್ನು ತೊಲಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ನಾಗಪ್ಪ ಅಂಬಿ ಮಾತನಾಡಿ, ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದ ರೈತರ ಪಹಣಿಯಲ್ಲಿ ವಕ್ಫ್ ಎಂದು ನಮೂದಾಗುತ್ತಿದೆ. ಸಚಿವ ಜಮೀರ್ ಅಹ್ಮದ್ ಜಿಲ್ಲಾಧಿಕಾರಿಗಳಿಗೆ ಒತ್ತಡ ಹಾಕಿ ಹೀಗೆ ಮಾಡಿಸುತ್ತಿದ್ದಾರೆ. ಇದೆಲ್ಲವೂ ಮುಖ್ಯಮಂತ್ರಿಗಳ ಗಮನಕ್ಕೆ ಬರದೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಡಾ. ರವಿ ನಂದಗಾಂವ, ಎಸ್.ಎಸ್. ಅಕ್ಕಿಮರಡಿ, ಸುನೀಲ ಕಂಬೋಗಿ, ಶ್ರೀಶೈಲಗೌಡ ಪಾಟೀಲ, ಶಂಕರ ಪಾಟೀಲ, ಇತರರು ಮಾತನಾಡಿದರು.
ಬಿಜೆಪಿ ಮುಖಂಡರಾದ ಕೆ.ಆರ್. ಮಾಚಪ್ಪನವರ, ಆರ್.ಟಿ. ಪಾಟೀಲ, ಶ್ರೀಕಾಂತ ಗುಜ್ಜನ್ನವರ, ರಾಜು ಯಡಹಳ್ಳಿ, , ಸಂಗಣ್ಣ ಕಾತರಕಿ, ಕರಬಸಯ್ಯ ಹಿರೇಮಠ, ಕಲ್ಮೇಶ ಗೋಸಾರ ಇತರರಿದ್ದರು.
ಪ್ರತಿಭಟನಾಕಾರರು ಕೆಲ ಸಮಯ ತಹಸೀಲ್ದಾರ ಕಚೇರಿ ಬಂದ್ ಮಾಡಿಸಿ, ರಸ್ತೆ ತಡೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿ, ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿದರು.