

ರೋಣ: ಪಟ್ಟಣದ ಬಸ್ ನಿಲ್ದಾಣದಲ್ಲಿ ಮಂಗವೊಂದು ಅಂಗಡಿಯಲ್ಲಿನ ಬಾಳೆಹಣ್ಣು ಗಳನ್ನು ಹೊತ್ತೊಯ್ದು ತಿಂದು ಹಾಕಿದೆ.
ಪಟ್ಟಣದಲ್ಲಿ ಕಳೆದ ಮೂರು ತಿಂಗಳಿನಿಂದ ಮಂಗಗಳ ಹಾವಳಿ ತೀವ್ರವಾಗಿದೆ. ಗ್ರಾಮಸ್ಥರು ಆತಂಕದಲ್ಲಿ ದಿನಗಳನ್ನು ದೂಡುತ್ತಿದ್ದಾರೆ.
ಈ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಮುಖ್ಯ ರಸ್ತೆಯಲ್ಲಿ ಅಡ್ಡಾಡುವ ಮಂಗಗಳ ಗುಂಪು, ಮನೆಯಿಂದ ಮನೆಗೆ ಜಿಗಿಯುತ್ತ ಜನರ ನೆಮ್ಮದಿ ಕಸಿದಿವೆ. ಮಕ್ಕಳು, ಮಹಿಳೆಯರು, ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸುತ್ತಿವೆ.
ಮಾರುಕಟ್ಟೆಯಲ್ಲಿರುವ ಹೋಟೆಲ್, ಅಂಗಡಿ, ಸಿಹಿ ತಿನಿಸುಗಳಿರುವ ಬೇಕರಿ, ಹಣ್ಣು ವ್ಯಾಪಾರಿಗಳ ಮಳಿಗೆಗಳಿಗೆ ದಾಳಿ ಮಾಡಿ ಕೈಗೆ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿವೆ.
ಅಂಗಡಿ ಮುಂದಿರುವ ಸಿಹಿ ತಿಂಡಿ- ತಿನಿಸುಗಳನ್ನು ಚೆಲ್ಲಾಡಿ ಗ್ರಾಹಕರಿಗೆ ತೊಂದರೆ ನೀಡುತ್ತಿವೆ. ಇದರಿಂದ ವ್ಯಾಪಾರಸ್ಥರು ನಷ್ಟ ಅನುಭವಿಸುವಂತಾಗಿದೆ.
ಬೆಳಗ್ಗೆ ಮತ್ತು ಸಂಜೆ ವೇಳೆ ಇವುಗಳ ದಾಳಿ ತೀವ್ರವಾಗಿರುತ್ತದೆ. ಮಕ್ಕಳು ಮನೆ ಮುಂದೆ ಆಟವಾಡಲು ಭಯ ಪಡುವಂತಾಗಿದೆ. ಇನ್ನು ಮನೆಗಳಿಗೆ ದಾಳಿ ಮಾಡುವ ಮಂಗಗಳು ಅಲ್ಲಿರುವ ಬೆಕ್ಕುಗಳನ್ನು ಸಾಯಿಸಿವೆ ಎನ್ನುತ್ತಾರೆ ಮಹಿಳೆಯರು.
ಬೇರೆ ಊರುಗಳಲ್ಲಿ ಸೆರೆ ಹಿಡಿದ ಮಂಗಗಳನ್ನು ತಂದು ತಾಲೂಕಿನ ಶಾಂತಗೇರಿ, ಸರ್ಜಾಪುರದ ಗುಡ್ಡುಗಾಡು ಪ್ರದೇಶದಲ್ಲಿ ಬಿಡುತ್ತಿದ್ದಾರೆ. ಮಂಗಗಳು ಆಹಾರ, ನೀರು ಅರಸಿ ರೋಣ ಪಟ್ಟಣಕ್ಕೆ ಬರುತ್ತಿವೆ ಎಂಬುದು ಸ್ಥಳೀಯರ ದೂರು.
ಮಂಗಗಳ ಹಾವಳಿಯಿಂದ ಮಕ್ಕಳು ಮನೆಯಿಂದ ಆಚೆ ಬರುವಂತಿಲ್ಲ. ಮನೆಯಿಂದ ಹೊರಗೆ ಬರುವವರ ಮೇಲೆ ಮಂಗಗಳು ಎರಗುತ್ತಿವೆ.
ದೊಡ್ಡವರು ಮತ್ತು ಮಕ್ಕಳು ಕೈಯಲ್ಲಿ ವಸ್ತುಗಳನ್ನು ಹಿಡಿದು ಹೋಗಲು ಭಯಪಂಡುವಂತಾಗಿದೆ. ಹೀಗಾಗಿ ಜನರು ಮನೆಯಿಂದ ಹೊರಗೆ ಹೋಗುವಾಗ ಕೈಯಲ್ಲಿ ಬಡಿಗೆ ಹಿಡಿದು ಹೋಗುತ್ತಿದ್ದಾರೆ.
ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಮಂಗಗಳನ್ನು ಹಿಡಿಯುವಂತೆ ಪುರಸಭೆಗೆ ಮನವಿ ಮಾಡಿದರೆ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ.
ಅರಣ್ಯ ಇಲಾಖೆ ಅಧಿಕಾರಿಗಳನ್ನು ಕೇಳಬೇಕು ಎನ್ನುತ್ತಾರೆ. ಅರಣ್ಯ ಇಲಾಖೆಯವರನ್ನು ಕೇಳಿದರೆ ಪಟ್ಟಣ ವ್ಯಾಪ್ತಿಯಲ್ಲಿ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪುರಸಭೆ ಸಿಬ್ಬಂದಿ ಮಂಗಗಳನ್ನು ಹಿಡಿದು ನಮಗೆ ನೀಡಿದರೆ, ನಾವು ಅವುಗಳನ್ನು ಅರಣ್ಯ ಪ್ರದೇಶಕ್ಕೆ ಬಿಡುತ್ತೇವೆ ಎಂದು ಉತ್ತರಿಸುತ್ತಾರೆ.
ಪುರಸಭೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವಿನ ಹೊಂದಾಣಿಕೆಯ ಕೊರತೆಯಿಂದ ಜನರು ತೊಂದರೆ ಅನುಭವಿಸುವಂತೆ ಆಗಿದೆ.
ಕಳೆದ ಮೂರ‌್ನಾಲ್ಕು ತಿಂಗಗಳಿಂದ ಬೀದಿಬದಿಯ ವ್ಯಾಪಾರಿಗಳು ಭಯದಲ್ಲಿಯೇ ಜೀವನ ಕಳೆಯುವಂತಾಗಿದೆ.
ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಆಗುವ ತೊಂದರೆ ನಿವಾರಿಸಬೇಕು ಎಂಬುದು ಬೀದಿ ಬದಿಯ ವ್ಯಾಪಾರಿಗಳ ಆಗ್ರಹ.