

ದಾವಣಗೆರೆ: ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆದು ಲಕ್ಷಾಂತರ ರೂ. ನಗದು ದೋಚುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಜಿಲ್ಲೆಯ ಪೊಲೀಸರು ಬಂಧಿಸಿ 21 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಚೆನ್ನೈ ಮೂಲದ ನರೇಶ ಮತ್ತು ಲೋಂಡಾ ಮೂಲದ ಮಹಮದ್ ಹುಸೇನ್ ಅಲಿಯಾಸ್ ಮುಲ್ಲಾ ಬಂಧಿತರು.
ಆರೋಪಿಗಳು ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಇಂಥ ಕೃತ್ಯಗಳಲ್ಲಿ ತೊಡಗುತ್ತಿದ್ದರು. ನೋಟನ್ನು ಕೆಳಗೆ ಬಿಸಾಕಿ "ನಿಮ್ಮ ಹಣ ಬಿದ್ದಿದೆ ತೆಗೆದುಕೊಳ್ಳಿ'' ಎಂದು ಹೇಳಿ ಜನರ ಗಮನ ಆ ಕಡೆಗೆ ಹೋಗುವಂತೆ ಮಾಡಿ, ಅಷ್ಟರಲ್ಲಿ ಜನರ ಬಳಿ ಹಣ ತೆಗೆದುಕೊಂಡು ಪರಾರಿಯಾಗುತ್ತಿದ್ದರು. ಬ್ಯಾಂಕಿನಿಂದ ಹಣ ಬಿಡಿಸಿಕೊಂಡು ಹೊರ ಬರುವ ಗ್ರಾಹಕರನ್ನು ಗುರಿಯಾಗಿಸಿಕೊಳ್ಳುತ್ತಿದ್ದರು. ವೃದ್ಧರು, ಒಬ್ಬಂಟಿಯಾಗಿ ಬಂದವರು ವಂಚನೆಗೆ ಒಳಗಾಗುತ್ತಿದ್ದರು. ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಹೋದ ಸಮಯದಲ್ಲೂ ಆರೋಪಿಗಳು ಕರಾಮತ್ತು ತೋರಿಸುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.
ಆರೋಪಿಗಳಿಂದ ದಾವಣಗೆರೆ ವಿದ್ಯಾನಗರ ಠಾಣೆಯ 2 ಪ್ರಕರಣಗಳಲ್ಲಿ 6 ಲಕ್ಷ, ಹರಿಹರ ನಗರ ಪೊಲೀಸ್ ಠಾಣೆಯ 1 ಪ್ರಕರಣದಲ್ಲಿ 2 ಲಕ್ಷ ರೂ, ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣೆಯ 1 ಪ್ರಕರಣದಲ್ಲಿ 13 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.